Topic-5

ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ಜುಗಾರಿ ಕ್ರಾಸ್ ಮಲೆನಾಡಿನ ಒಬ್ಬ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆಯಾಗಿದೆ. ಸಂಪೂರ್ಣ ಕೃತಿಯು ಮಲೆನಾಡಿನ ಆಡುಭಾಷೆಯಲ್ಲೆ ಬರೆಯಲ್ಪಟ್ಟಿದ್ದು ಓದುವರಿಗೆ ಬಹಳ ಮನರಂಜನೆಯನ್ನು ಕೊಡುತ್ತದೆ. ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಮಲೆನಾಡಿನ ಜೇವನ, ಪರಿಸರ ಹಾಗು ಅಲ್ಲಿನ ಕಷ್ಟ-ಸುಖಗಳನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಕಥೆಯು ಕಾಲ್ಪನಿಕವಾದರೂ, ನೈಜತೆಗೆ ಬಹಳ ಹತ್ತಿರವಾಗಿದೆ. ಮಲೆನಾಡಿನ ದಟ್ಟ ಕಾಡುಗಳಲ್ಲಿ ಬದುಕುತ್ತಿರುವ ಜನರ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಈ ಕೃತಿಯಲ್ಲಿ ಚಿತ್ರಿಸಲಾಗಿದೆ. ಈ ಕೃತಿ ಮಲೆನಾಡಿನಲ್ಲಿ ನಡೆಯುತ್ತಿರುವ ಅರಣ್ಯನಾಶದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.

ಇದೊಂದು ಕೇವಲ ೨೪ ಗಂಟೆಗಳ ಅವಧಿಯಲ್ಲಿ ನಡೆಯುವ ಪತ್ತೆದಾರಿ ಕಾದಂಬರಿಯಾಗಿದೆ. ಈ ಘಟನೆ ನಡೆಯುವ ಪ್ರದೇಶ ಮಂಗಳೂರು – ಬೆಂಗಳೂರು ರಸ್ತೆಯಲ್ಲಿರುವ ಜುಗಾರಿ ಕ್ರಾಸ್ ಮತ್ತು ದೇವಪುರಗಳಲ್ಲಿ. ಕಾದಂಬರಿಯಲ್ಲಿ ರಹಸ್ಯವಾಗಿ ನಡೆಯುವ ಅಪರಾಧ ಪ್ರಕರಣಗಳು ಒಂದು ಕಥೆಯಾದರೆ, ಪತ್ತೆದಾರ ಅವುಗಳನ್ನು ಬಯಲಿಗೆಳೆಯುವ ಕತೆ ಇನ್ನೊಂದು. ಬಸ್ಸಿನಲ್ಲಿ ಪ್ರಯಾಣ ಮಾಡುವ ಸುರೇಶ ಮತ್ತು ಗೌರಿಯರ ಒಂದು ದಿನದ ಅನುಭವ ಓದುಗನಿಗೆ ಒಂದು ಯುಗದ ಅನುಭವವನ್ನು ಉಂಟುಮಾಡುತ್ತದೆ. ಯಾಲಕ್ಕಿಯ ಮೂಟೆಯನ್ನು ಮಾರಲು ಬಸ್ಸಿನಲ್ಲಿ ಸಾಗಿಸುವಾಗ ಸುರೇಶ – ಗೌರಿಯರು ತಮಗೆ ಗೊತ್ತಿಲ್ಲದಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಭೂಗತ ಜಗತ್ತಿನ ಚಕ್ರವ್ಯೂಹದೊಳಗೆ ಸಿಲುಕಿ ಕೊನೆಗೆ ಪಾರಾಗುತ್ತಾರೆ. ಹಾಗೆ ನೋಡಿದರೆ ಇದು ಸಾಹಸ ಕಥೆಯಾಗಿದೆ. ಇವರಿಬ್ಬರ ಸಾಹಸ ಸಿದ್ದಿಯೆಂದರೆ ಕೊನೆಗೆ ಜೀವ ಉಳಿಸಿಕೊಳ್ಳುವುದಾಗಿದೆ.

’ಜುಗಾರಿ ಕ್ರಾಸ್’ ಕಾದಂಬರಿಯ ಮೊದಲ ಭಾಗ ಅಮೂರ್ತವಾದ ಭೂಗತ ಜಗತ್ತಿನ ಸ್ವರೂಪವನ್ನು ಪರಿಚಯ ಮಾಡಿಕೊಟ್ಟರೆ, ಎರಡನೆಯ ಭಾಗದಲ್ಲಿ ಸುರೇಶ – ಗೌರಿಯರು ಅದರಲ್ಲಿ ಸಿಕ್ಕಿ ತಪ್ಪಿಸಿಕೊಳ್ಳಲು ಹೆಣಗಾಡುವ ಚಿತ್ರಣವಿದೆ. ಈ ಹೆಣಗಾಟದಲ್ಲಿ ಮನ್ಮಥ ಬೀಡಾಸ್ಟಾಲ್ ನ ಶೇಷಪ್ಪ, ಸುರೇಶನ ಸಹಪಾಟಿ ರಾಜಪ್ಪ ಸೇರಿಕೊಳ್ಳುತ್ತಾರೆ. ಭೂಗತ ಜಗತ್ತೆಂದರೆ ಕೊಲೆ ಮಾಡುವುದು ಅಥವಾ ಕೊಲೆಯಾಗುವುದು ಇವೆರಡರ ನಡುವೆಯೇ ಅದರ ಅಸ್ತಿತ್ವ. ಇನ್ನೊಂದು ಸಾಧ್ಯತೆಯೆಂದರೆ ಆತ್ಮಹತ್ಯೆ ಅಷ್ಟೆ.

ಮೂಕಿ ದ್ಯಾವಮ್ಮನ ಮಗಳು ಹೂವಿನ ಮಾಲೆಗಳನ್ನು ಮಾರುತ್ತಿರುವಾಗ ದೌಲತರಾಮ ಅವಳಿಗೆ ಹತ್ತು ರೂಪಾಯಿ ನೋಟು ಕೊಟ್ಟು ಅವಳನ್ನು ಅಲ್ಲಿಂದ ಸಾಗಹಾಕುವುದು ತಾವು ಮಾಡುವ ಕೃತ್ಯಕ್ಕೆ ಅಡ್ಡಲಾಗಿದ್ದಾಳೆಂಬ ಕಲ್ಪನೆ ಅವರಿಗೆ. ಅವಳು ತನಗೆ ಗೊತ್ತಿಲ್ಲದೆ ಬಂದು ಅಪರಾಧದ ಕೃತ್ಯಕ್ಕೆ ಅಡ್ಡಲಾಗಿ ನಿಂತಿರುವುದೇ ಅವಳ ತಪ್ಪು. ಸುರೇಶ ಗೌರಿಯರು ಕೂಡ ಅವಳಂತೆ ತಮಗೆ ಅರಿವಾಗದಂತೆ ಅಪರಾಧದ ವಿರುದ್ಧ ನಿಂತಿದ್ದಾರೆ.

ಈ ಅಪರಾಧಗಳ ಲೋಕದ ಅನಾವರಣವನ್ನು ಪತ್ತೇದಾರನಾದ ರಾಜಪ್ಪ ಮಾಡಲು ಹೋಗುತ್ತಾನೆ. ಹಳೆಯ ಕಾವ್ಯದ ಕಡತ – ಸಹ್ಯಾದ್ರಿ ಶಿಖರವೊಂದರಲ್ಲಿ ಕೆಂಪು ರತ್ನಗಳಿರುವ ಸ್ಥಳದ ಸುಳಿವು ಭೂಗತ ಜಗತ್ತಿನ ಅನಾವರಣದ ವಸ್ತುಗಳಾಗಿವೆ.

ಒಟ್ಟಿನಲ್ಲಿ ಜುಗಾರಿ ಕ್ರಾಸ್ ಕಾದಂಬರಿಯಲ್ಲಿ ಅಂತರ್ಗತವಾಗಿರುವ ಸಾಹಸ ಕಥೆ ಮತ್ತು ಪತ್ತೇದಾರಿ ಕಾದಂಬರಿಯಾಗಿ ಅದ್ಭುತವಾಗಿ ಮೂಡಿಬಂದಿದೆ. ಕಾದಂಬರಿಯನ್ನು ಓದುತ್ತಾ ಹೋದಂತೆ ಕಲ್ಪನಾ ಜಗತ್ತಿನಲ್ಲಿ ನಿಂತು ನೋಡುತ್ತಿರುವಂತೆ ತಾನು ಅದರಲ್ಲಿನ ಪಾತ್ರವೆಂಬಂತೆ ಓದುಗನಿಗೆ ಭಾಷವಾಗುತ್ತದೆ.