ಲೈಮನ್ ಹಾಲ್ (Lyman Hall)

ಲೈಮನ್ ಹಾಲ್ (Lyman Hall) ಅಮೆರಿಕನ್ ವೈದ್ಯ ಮತ್ತು ಪ್ರಸಿದ್ಧ ರಾಜಕಾರಣಿ. ಜಾರ್ಜಿಯಾ ರಾಜ್ಯದ ಪ್ರತಿನಿಧಿಯಾಗಿ ಯುನೈಟೆಡ್ ಸ್ಟೇಟ್ಸ್ ಸ್ವಾತಂತ್ರ‍್ಯ ಘೋಷಣೆಗೆ ಸಹಿ ಹಾಕಿದವರಲ್ಲಿ ಒಬ್ಬ. ಆತ ಪದವಿ ಪಡೆದ ನಂತರ ಕೆಲವು ವರ್ಷಗಳ ಕಾಲ ಪಾದ್ರಿಯಾಗಿ ಸೇವೆ ಸಲ್ಲಿಸಿದನು. ಆದರೆ ಅವನ ನಿಜವಾದ ಶಕ್ತಿ ನಾಯಕತ್ವದ ಗುಣವಾಗಿದ್ದು ಅದು ಬಹುಸಂಖ್ಯಾತ ಜನರ ಮೇಲೆ ಪ್ರಭಾವ ಬೀರಿತು. ಔಷಧ ವಿಷಯವನ್ನು ಅಧ್ಯಯನ ಮಾಡಿ ಮುಂದೆ ರಾಜಕೀಯ ಪ್ರವೇಶಿಸಿ ಸಚಿವನಾಗಿ ಆಯ್ಕೆಯಾದನು. ವೃತ್ತಿ ಜೀವನದ ಆರಂಭದಲ್ಲಿ ಜಾರ್ಜಿಯಾದ ಕ್ರಾಂತಿಕಾರಿ ರಾಜಕಾರಣದ ಕೇಂದ್ರವಾಗಿ ರೂಪುಗೊಂಡನು. ಜನರ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಪ್ರಾರಂಬಿಸಿ ಅಂತಿಮವಾಗಿ ಸ್ವಾತಂತ್ರ‍್ಯ ಘೋಷಣೆಗೆ ಸಹಿ ಹಾಕಿದ ಜಾರ್ಜಿಯಾ ಕಾಂಗ್ರೆಸ್ಸಿನ ಮೂವರು ಪ್ರತಿನಿಧಿಗಳಲ್ಲಿ ಒಬ್ಬ ಎಂಬ ಖ್ಯಾತಿಗೆ ಪಾತ್ರನಾದನು. ಸ್ವಾತಂತ್ರ‍್ಯದ ನಂತರ ಜಾರ್ಜಿಯಾದ ಗವರ್ನರ್ ಆಗಿ ಸೇವೆ ಸಲ್ಲಿಸಿದನು. ಜಾರ್ಜಿಯಾ ರಾಜ್ಯವು ಅವನ ಹೆಸರನ್ನು ಹಾಲ್ ಕೌಂಟಿ ಎಂದು ಹೆಸರಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈತನನ್ನು ಸ್ವಾತಂತ್ರ‍್ಯ ಮತ್ತು ಮಾನವೀಯತೆಯನ್ನು ಬೆಂಬಲಿಸಿದ ಮಹಾನ್ ಕ್ರಾಂತಿಕಾರಿಗಳಲ್ಲಿ ಒಬ್ಬನೆಂದು ನೆನಪಿಸಿಕೊಳ್ಳುತ್ತಾರೆ.

ಬಾಲ್ಯ ಮತ್ತು ಆರಂಭಿಕ ಜೀವನ
ಲೈಮನ್ ಹಾಲ್ (Lyman Hall) ಏಪ್ರಿಲ್ 12, 1724 ರಂದು ಕನೆಕ್ಟಿಕಟ್ ರಾಜ್ಯದ ನ್ಯೂ ಹೆವನ್‌ನ ವಾಲಿಂಗ್‌ಫೋರ್ಡ್ ನಲ್ಲಿ  ಜಾನ್ ಹಾಲ್‌ ಮತ್ತು ಮೇರಿ ಸ್ಟ್ರೀಟ್ ಗೆ ಜನಿಸಿದನು. ಈತ ದಂಪತಿಗಳ ಎಂಟು ಮಕ್ಕಳಲ್ಲಿ ಒಬ್ಬ. 1747 ರಲ್ಲಿ ಯೇಲ್ ಕಾಲೇಜಿನಿಂದ ಪದವಿ ಪಡೆದನು. ಅವನ ತಾಯಿಯ ತಂದೆ ‘ರೆವ್’ನು ಸ್ಯಾಮ್ಯುಯೆಲ್ ಸ್ಟ್ರೀಟ್ ಪಟ್ಟಣದ ಮೊದಲ ಚರ್ಚ್ ಪಾದ್ರಿ. ಅವರ ಮಾರ್ಗದರ್ಶನದಲ್ಲಿ ದೇವತಾಶಾಸ್ತ್ರದ ಅಧ್ಯಯನ ಮಾಡಿ ಹಲವಾರು ಚರ್ಚುಗಳಲ್ಲಿ ಪಾದ್ರಿಯಾಗಿಯೂ ಸೇವೆ ಸಲ್ಲಿಸಿದನು. ಅವನ ವಿರುದ್ಧ ಆರೋಪಗಳು ಸಾಬೀತಾದ ನಂತರ ಚರ್ಚಿನಿಂದ ವಜಾಗೊಳಿಸಲಾಯಿತು. ಸಮುದಾಯದ ಜನರ ವಿಶ್ವಾಸಕ್ಕೆ ಪಾತ್ರನಾದ ಅವನನ್ನು ಪುನಃ ನೇಮಿಸಿಕೊಳ್ಳಲಾಯಿತು.

ವೃತ್ತಿ
ಔಷಧ ವಿಷಯವನ್ನು ಅಧ್ಯಯನ ಮಾಡಿದ ಲೈಮನ್ ಹಾಲ್ (Lyman Hall) ಡಾಕ್ಟರ್ ಆಫ್ ಮೆಡಿಸಿನ್ ಪದವಿ ಪಡೆದನು. ಪ್ರಾರಂಭದಲ್ಲಿ ತಮ್ಮ ಊರಿನಲ್ಲಿ ವೈದ್ಯಕೀಯ ಅಭ್ಯಾಸ ಮಾಡಲು ಪ್ರಾರಂಭಿಸಿದನು. 1752 ರಲ್ಲಿ ದಕ್ಷಿಣ ಕೆರೊಲಿನಾಗೆ ತೆರಳಿ ತನ್ನ ಇಚ್ಛೆಯಂತೆ ಡಾರ್ಚೆಸ್ಟರ್‌ಗೆ ವಲಸೆ ಬಂದ ಕಾಂಗ್ರೇಷನಲಿಸ್ಟ್ ಗಳ ವೈದ್ಯಕೀಯ ಸೇವೆಯಲ್ಲಿ ನಿರತನಾದನು. ಸೌಹಾರ್ದಯುತವಾಗಿ ಸಮುದಾಯವು ಆತನನ್ನು ಸ್ವಾಗತಿಸಿತು. ಅವನು ತನ್ನ ಮೃದು ದೃಷ್ಟಿಕೋನಗಳ ಮೂಲಕ ಜನರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾದನು. 1757 ರಲ್ಲಿ ಜಾರ್ಜಿಯಾದಲ್ಲಿದ್ದ ಭೂ ಸಂಪನ್ಮೂಲಗಳ ಬಗ್ಗೆ ತಿಳಿದ ಡಾರ್ಚೆಸ್ಟರ್ ಸೊಸೈಟಿಯ ಜನರು ಲಿಬರ್ಟಿ ಕೌಂಟಿಯಲ್ಲಿದ್ದ ಮಿಡ್ವೇ ಜಿಲ್ಲೆಗೆ ವಲಸೆ ಹೋಗಲು ಪ್ರಾರಂಭಿಸಿದರು. ಅವರೊಂದಿಗೆ ಲೈಮನ್ ಹಾಲ್ ಸಹ ಒಂದು ಚಿಕ್ಕ ತೋಟದ ಮಾಲೀಕನಾದನು. ಹೊಸನಗರ ಸನ್‌ಬರಿಯಲ್ಲಿದ್ದ ಸಮಯದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದನು. ಆ ಸ್ಥಳದ ವಾತಾವರಣವು ಬೇಸಿಗೆಯಲ್ಲಿ ಜನರು ಪಿತ್ತರಸ ಜ್ವರದಿಂದ ಬಳಲುವಂತೆ ಮಾಡುತ್ತಿತ್ತು. ಜನರ ಸೋಂಕು ನಿಯಂತ್ರಿಸಲು ಮತ್ತು ರೋಗವನ್ನು ತಡೆಗಟ್ಟಲು ದಣಿವರಿದು ದುಡಿದನು. ಇದರಿಂದ ಸಮುದಾಯದ ಜನರು ಈತನನ್ನು ಪ್ರೀತಿಸಲು ಪ್ರಾರಂಭಿಸಿದರು.

ಅವನ ವಿನಯತೆ ಮತ್ತು ಸಹಾಯ ಪ್ರವೃತ್ತಿ ಜನರ ಮೆಚ್ಚುಗೆ ಪಡೆಯಿತು. ಶೀಘ್ರದಲ್ಲೇ ಪಟ್ಟಣದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬನಾಗಿ ಮಾರ್ಪಟ್ಟನು. ಸಾರ್ವಜನಿಕ ಸಭೆಗಳಲ್ಲಿ ಆಸಕ್ತಿ ಹೊಂದಿದ್ದ ಈತ ಅವುಗಳಲ್ಲಿ ಭಾಗವಹಿಸಿ ಸಹವರ್ತಿ ನಾಗರಿಕರ ವಿಶ್ವಾಸವನ್ನು ಪಡೆದನು. 1770 ರ ದಶಕದಲ್ಲಿ ಕ್ರಾಂತಿ ಪ್ರಾರಂಭವಾದಾಗ ತಮ್ಮ ನಗರದ ಪ್ರತಿನಿಧಿಯಾಗಿ ಕ್ರಾಂತಿಯಲ್ಲಿ ಪಾಲ್ಗೊಂಡನು. 1775 ರಲ್ಲಿ ಎರಡನೇ ಕಾಂಟಿನೆಂಟಲ್ ಕಾಂಗ್ರೆಸ್‌ನಲ್ಲಿ ಸೇಂಟ್ ಜಾನ್ಸ್ ಪ್ಯಾರಿಷ್‌ನ ಪ್ರತಿನಿಧಿಯಾಗಿ ಭಾಗವಹಿಸಿದನು. ಇದರ ಮೂಲಕ ಜಾರ್ಜಿಯಾ ಪ್ರಾಂತ್ಯವನ್ನು ಪ್ರತಿನಿಧಿಸಿದ ಮೊದಲ ವ್ಯಕ್ತಿಯಾದನು. ತನ್ನ ದೃಡ ಸಂಕಲ್ಪದಿಂದ ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿ ತನ್ನದೇ ಆದ ಕೊಡುಗೆಯನ್ನು ನೀಡಿದನು. ಆಗಸ್ಟ್ 2, 1776 ರಂದು ಜಾರ್ಜಿಯಾ ಪ್ರಾಂತ್ಯದಿಂದ ಸ್ವಾತಂತ್ರ‍್ಯ ಘೋಷಣೆಗೆ ಸಹಿ ಹಾಕಿದ ಮೂವರು(ಬಟನ್ ಗ್ವಿನೆಟ್ ಮತ್ತು ಜಾರ್ಜ್ ವಾಲ್ಟನ್) ನೇಮಕಗೊಂಡ ಪ್ರತಿನಿಧಿಗಳಲ್ಲಿ ಒಬ್ಬ. ಪ್ರಾಂತೀಯ ಕಾಂಗ್ರೆಸ್ ರಚಿಸಿ ಅದನ್ನು ಮುನ್ನಡೆಸಿದನು. ಈ ಪ್ರಾಂತೀಯ ಕಾಂಗ್ರೇಸ್ ಮೂಲಕ ಅಪಾರ ಜನರ ಪ್ರೀತಿ ವಿಶ್ವಾಸ ಗಳಿಸಿದನು. ಜಾರ್ಜಿಯಾ ಪ್ರಾಂತ್ಯದ ಪ್ರತಿನಿಧಿಯಾಗಿ ತನ್ನೆಲ್ಲಾ ಜನರ ಬೆಂಬಲದಿಂದ ಕ್ರಾಂತಿಯಲ್ಲಿ ತನ್ನದೇ ಆದ ಪಾತ್ರ ವಹಿಸಿದನು.

ಅಮೆರಿಕಾ ಕ್ರಾಂತಿ ಮುಕ್ತಾಯದ ನಂತರ ಜನವರಿ 1783 ರಲ್ಲಿ ಜಾರ್ಜಿಯಾದ ಸ್ವತಂತ್ರ ರಾಜ್ಯದ ಮೊದಲ ರಾಜ್ಯಪಾಲನಾಗಿ ಆಯ್ಕೆಯಾದನು. ಕೂಡಲೇ ಅದರ ಮರು ಸಂಘಟನೆ ಮತ್ತು ಏಕೀಕರಣಕ್ಕಾಗಿ ಒತ್ತುಕೊಟ್ಟು ಕಾರ್ಯನಿರ್ವಹಿಸಿದನು. ಅದರ ಆರ್ಥಿಕ, ಸಾಮಾಜಿಕ ಬೆಳವಳಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದನು. ಒಂದು ವರ್ಷದ ನಂತರ ವಿಧಾನಸಭೆಗೆ ನ್ಯಾಯಾಧೀಶರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದನು. ಜಾರ್ಜಿಯಾ ಪ್ರಾಂತ್ಯದ ಹೊಸ ನಗರವಾದ ಸನ್‌ಬರಿಯ ಪ್ರಮುಖ ನಾಗರಿಕರಲ್ಲಿ ಒಬ್ಬನಾದನು. ಜಾರ್ಜಿಯಾ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದನು. ಹೊಸ ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಅನುದಾನದ ಪ್ರಸ್ತಾಪವನ್ನು ನೀಡಿದನು. ಅಂತಿಮವಾಗಿ ಅದು ಇಂದಿನ ವಿಶ್ವವಿದ್ಯಾಲಯ ವ್ಯವಸ್ಥೆಯ ರಚನೆಗೆ ಅಡಿಪಾಯವಾಯಿತು.

ಮೇ 20, 1752 ರಂದು ಕನೆಕ್ಟಿಕಟ್‌ನ ಫೇರ್‌ಫೀಲ್ಡ್ ನ ಥಡ್ಡಿಯಸ್ ಬರ್ ಮತ್ತು ಅಬಿಗೈಲ್ ಸ್ಟರ್ಜಸ್ ಅವರ ಪುತ್ರಿ ‘ಅಬಿಗೈಲ್ ಬರ್’ಳನ್ನು ವಿವಾಹವಾದನು. ದುರದೃಷ್ಟವಶಾತ್ ಆಕೆ ಒಂದು ವರ್ಷದ ನಂತರ ನಿಧನಳಾದಳು. 1757 ರಲ್ಲಿ ಅವರು ಕನೆಕ್ಟಿಕಟ್‌ನ ಫೇರ್‌ಫೀಲ್ಡ್ ನ ರೆವ್‘ಸ್ಯಾಮ್ಯುಯೆಲ್’ ಮತ್ತು ‘ಹನ್ನಾ ಓಸ್ಬೋರ್ನ್’ರವರ ಮಗಳಾದ ‘ಮೇರಿ ಓಸ್ಬೋರ್ನ್’ ಳನ್ನು ಮರುಮದುವೆಯಾದನು. ಅವರಿಗೆ ಜಾನ್ ಎಂಬ ಮಗನಿದ್ದನು. ಲೈಮನ್ ಹಾಲ್ ಅಕ್ಟೋಬರ್ 19, 1790 ರಂದು ಜಾರ್ಜಿಯಾದ ಬರ್ಕ್ ಕೌಂಟಿಯ ಸಣ್ಣ ತೋಟದಲ್ಲಿ ಮರಣ ಹೊಂದಿದನು. ದೃಡ ಮನಸ್ಸು ಮತ್ತು ಅಪಾರ ದೇಶಭಕ್ತಿ ಹೊಂದಿದ್ದ ಮನುಷ್ಯ ಎಂದು ಆತನನ್ನು ಇಂದಿಗೂ ಸ್ಮರಿಸಲಾಗುತ್ತದೆ. ಜಾರ್ಜಿಯಾದ ಒಂದು ಕೌಂಟಿಗೆ ಅವನ ಗೌರವಾರ್ಥವಾಗಿ ‘ಹಾಲ್ ಕೌಂಟಿ’ ಎಂದು ಹೆಸರಿಸಲಾಗಿದೆ. ಕನೆಕ್ಟಿಕಟ್‌ನ ಒಂದು ಪ್ರೌಢಶಾಲೆಗೆ ಆತನ ಹೆಸರಿಡುವ ಮೂಲಕ ಗೌರವಿಸಲಾಯಿತು. ಹಾಲ್ ಕೌಂಟಿ ಮತ್ತು ಜಾರ್ಜಿಯಾದ ಲಿಬರ್ಟಿ ಕೌಂಟಿಯ ಹಲವಾರು ಶಾಲೆಗಳಿಗೂ ಸಹ ಅವನ ಹೆಸರನ್ನಿಡಲಾಗಿದೆ.

# ಲೈಮನ್ ಹಾಲ್

# Lyman Hall

# Kannada Butti