ಜೋನ್ ಆಫ್ ಆರ್ಕ್ (Joan of Arc)

ಜೋನ್ ಆಫ್ ಆರ್ಕ್ (Joan of Arc) ಫ್ರೆಂಚ್ ಮತ್ತು ಬ್ರಿಟೀಷರ ನಡುವಿನ ‘ನೂರು ವರ್ಷಗಳ ಕದನ’ (Hundred Years’ War) ದಲ್ಲಿ ಫ್ರೆಂಚ್ ಸೈನ್ಯ ಬ್ರಿಟಿಷರ ವಿರುದ್ಧ ಜಯಗಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಯುವತಿ. ಆಕೆಯನ್ನು ಆಗಾಗ್ಗೆ ಫ್ರಾನ್ಸ್ ನ ನಾಯಕಿ ಎಂದು ಪ್ರಶಂಸಿಸಲಾಗುತ್ತದೆ. ಫ್ರಾನ್ಸ್ ನ ಸರಳ ರೈತ ಕುಟುಂಬದಲ್ಲಿ ಜನಿಸಿದ ಜೋನ್‌ ಚಿಕ್ಕವಳಿದ್ದಾಗಿನಿಂದಲೂ ಪ್ರಧಾನ ದೇವದೂತರು ಮತ್ತು ಸಂತರ ದೈವಿಕ ದರ್ಶನಗಳನ್ನು ಪಡೆದಿದ್ದಾಳೆಂದು ನಂಬಲಾಗಿದೆ. ಧಾರ್ಮಿಕ ಪೋಷಕರ ಮಗಳಾದ ಜೋನ್ ಕೂಡ ಚಿಕ್ಕ ವಯಸ್ಸಿನಿಂದಲೂ ದೇವರು ಮತ್ತು ಧರ್ಮದ ಕಡೆಗೆ ಒಲವು ತೋರಿದ್ದಳು. ದೈವಿಕ ದರ್ಶನಗಳನ್ನು ಅನುಭವಿಸಿದುದು ಅವಳ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿತು. ಸೇಂಟ್ ಮೈಕೆಲ್, ಸೇಂಟ್ ಕ್ಯಾಥರೀನ್ ಮತ್ತು ಸೇಂಟ್ ಮಾರ್ಗರೇಟ್‌ರು ಇಂಗ್ಲಿಷರನ್ನು ಓಡಿಸಲು ಮತ್ತು ಡೌಫಿನ್‌ನ ಪಟ್ಟಾಭಿಷೇಕಕ್ಕಾಗಿ ಆತನನ್ನು ರೀಮ್ಸ್ ಗೆ ಕರೆತರುವಂತೆ ಸೂಚನೆ ನೀಡಿದ್ದರು. ಆ ಕಾಲದಲ್ಲಿ ಫ್ರಾನ್ಸ್ ನ ಕಿರೀಟವು ಡೌಫಿನ್ ಚಾರ್ಲ್ಸ್ ಮತ್ತು ಇಂಗ್ಲಿಷ್‌ರ ರಾಜ ಐದನೇ ಹೆನ್ರಿ ನಡುವೆ ವಿವಾದದಲ್ಲಿತ್ತು. ಡೌಫಿನ್‌ನ ತಂದೆ ಮರಣ ಹೊಂದಿ ಏಳು ವರ್ಷಗಳು ಕಳೆದಿದ್ದರೂ ಸಹ ಅವನಿಗೆ ಇನ್ನೂ ಪಟ್ಟಾಭಿಷೇಕವಾಗಿರಲಿಲ್ಲ.ಇದರಿಂದ ಜೋನ್ ಡೌಫಿನ್ ಪರ ಸೇರಲು ಸಂತರಲ್ಲಿ ಅನುಮತಿ ಕೋರಿದಳು. ಡೌಫಿನ್ ಪರವಾಗಿ ಆಕೆ ಫ್ರೆಂಚ್ ಸೈನ್ಯವನ್ನು ಇಂಗ್ಲಿಷರ ವಿರುದ್ಧದ ಯುದ್ಧದಲ್ಲಿ ಮುನ್ನಡೆಸಿ ವಿಜಯಶಾಲಿಯಾದಳು. ಒಂದು ವರ್ಷದ ನಂತರ ಅವಳನ್ನು ಶತ್ರುಗಳು ಸೆರೆ ಹಿಡಿದು ಕಾಟಾಚಾರಕ್ಕಾಗಿ ವಿಚಾರಣೆಗೆ ಒಳಪಡಿಸಿದರು. ತರುವಾಯ ತಪ್ಪಿತಸ್ಥಳೆಂದು ಘೋಷಿಸಿ ಜೋನ್‌ಳನ್ನುಸಜೀವವಾಗಿ ಸುಡಲಾಯಿತು. ಕೆಲವು ವರ್ಷಗಳ ನಂತರ ಅವಳನ್ನು ಹುತಾತ್ಮಳೆಂದು ಘೋಷಿಸಲಾಯಿತು.

ಬಾಲ್ಯ ಮತ್ತು ಆರಂಭಿಕ ಜೀವನ
ಜೋನ್ ಆಫ್ ಆರ್ಕ್ (Joan of Arc) 15 ನೇ ಶತಮಾನದ ಆರಂಭದಲ್ಲಿ ಫ್ರಾನ್ಸ್ ಸಾಮ್ರಾಜ್ಯದ ಡೊಮ್ರೊಮಿಯಲ್ಲಿ ಜಾಕ್ವೆಸ್ ಡಿ ಆರ್ಕ್ ಮತ್ತು ಇಸಾಬೆಲ್ಲೆ ರೋಮಿ ದಂಪತಿಗಳಿಗೆ ಜನಿಸಿದರು. ಜೋನ್ ಹುಟ್ಟಿದ್ದು 1412 ಎಂದು ನಂಬಲಾಗಿದೆ. ಆಕೆಯ ಪೊಷಕರು ರೈತರಾಗಿದ್ದು ಸುಮಾರು 50 ಎಕರೆ ಭೂಮಿಯನ್ನು ಹೊಂದಿದ್ದರು. ಅವಳು ಚಿಕ್ಕ ವಯಸ್ಸಿನಿಂದಲೂ ಧರ್ಮದ ಕಡೆಗೆ ಒಲವು ಹೊಂದಿದ್ದಳು. ಆಳವಾದ ಧರ್ಮನಿಷ್ಠೆಯನ್ನು ಹೊಂದಿದ್ದ ಆಕೆ ಪೂಜ್ಯ ಮೇರಿಯನ್ನು ಪೂಜಿಸುತ್ತಾ ದೇವರ ಸೇವೆಗೆ ಬದ್ಧಳಾಗಿದ್ದಳು. ಅವಳು ಸುಮಾರು 12-13 ವರ್ಷದವಳಿದ್ದಾಗ ದೈವಿಕ ದರ್ಶನಗಳನ್ನು ಅನುಭವಿಸಲು ಪ್ರಾರಂಭಿಸಿ ದೈವಿಕ ದರ್ಶನಗಳನ್ನು ಪಡೆದಳು. ಇಂಗ್ಲಿಷರನ್ನು ಓಡಿಸಿ ಡೌಫಿನ್‌ನನ್ನು ರೀಮ್ಸ್ ಗೆ ಕರೆತಂದು ಪಟ್ಟಾಭಿಷೇಕ ಮಾಡಿಸುವ ಮೂಲಕ ಫ್ರೆಂಚ್ ಸೈನ್ಯಕ್ಕೆ ಸೇವೆ ಸಲ್ಲಿಸಲು ದೇವರ ಆಜ್ಞೆಯನ್ನು ಕೇಳಿದಳು. ಅವಳ ದೃಷ್ಟಿಕೋನಗಳು ತುಂಬಾ ನೈಜವಾಗಿದ್ದವು. ಆಕೆ ತನ್ನ ದೈವಿಕ ಸಂವಹನವನ್ನುಇನ್ನೊಬ್ಬ ವ್ಯಕ್ತಿಯೊಂದಿಗೆ ನಡೆಸುತ್ತಿದ್ದೇನೆಂದು ಭಾವಿಸಿ ಸೇಂಟ್ ಮೈಕೆಲ್, ಸೇಂಟ್ ಮಾರ್ಗರೇಟ್ ಮತ್ತು ಸೇಂಟ್ ಕ್ಯಾಥರೀನ್‌ರಂತಹ ಸಂತರ ದರ್ಶನಗಳನ್ನು ಪಡೆದಳು.

ಆ ಸಮಯದಲ್ಲಿ ಫ್ರೆಂಚ್ ಮತ್ತು ಬ್ರಿಟೀಷರ ನಡುವೆ ನೂರು ವರ್ಷಗಳ ಕದನ ಉಲ್ಬಣಗೊಳ್ಳುತ್ತಿತ್ತು. ಫ್ರಾನ್ಸ್ ನ ಕಿರೀಟವು ಡೌಫಿನ್ ಚಾರ್ಲ್ಸ್ (ನಂತರ ಏಳನೇ ಚಾರ್ಲ್ಸ್), ನಾಲ್ಕನೇ ಚಾರ್ಲ್ಸ್ ಮತ್ತು ಬ್ರಿಟೀಷ್ ರಾಜ ಐದನೇ ಹೆನ್ರಿ ನಡುವೆ ಉತ್ತರಾಧಿಕಾರಕ್ಕಾಗಿ ವಿವಾದದಲ್ಲಿತ್ತು. 1415 ರಲ್ಲಿ ಇಂಗ್ಲೆಂಡಿನ ರಾಜ ಐದನೇ ಹೆನ್ರಿ ಫ್ರಾನ್ಸ್ ಮೇಲೆ ಆಕ್ರಮಣ ಮಾಡಿ ಫ್ರೆಂಚ್ ಸೈನ್ಯವನ್ನು ಅಜಿನ್‌ಕೋರ್ಟ್ ನಲ್ಲಿ ಸೋಲಿಸಿದನು. ಆರನೇ ಚಾರ್ಲ್ಸ್ ಮರಣ ಹೊಂದಿ ಏಳು ವರ್ಷಗಳು ಕಳೆದರೂ ಸಹ ಅವರ ಮಗ ಡೌಫಿನ್ ಚಾರ್ಲ್ಸ್ ಇನ್ನೂ ಫ್ರಾನ್ಸ್ ನ ರಾಜನಾಗಿ ಪಟ್ಟಾಭಿಷಕ್ತನಾಗಿರಲಿಲ್ಲ. ಫ್ರೆಂಚ್ ರಾಜರನ್ನು ಸಾಂಪ್ರದಾಯಿಕವಾಗಿ ಕಿರೀಟಧಾರಣೆ ಮಾಡುವ ಸ್ಥಳವಾದ ರೀಮ್ಸ್ ಅನ್ನು ಅವನ ಶತ್ರುಗಳು ವಶಪಡಿಸಿಕೊಂಡಿದ್ದರು.

ಮಿಲಿಟರಿ ಕಾರ್ಯಾಚರಣೆಗಳು
ಮೇ 1428 ರಂದು ಜೋನ್ ಆಫ್ ಆರ್ಕ್ (Joan of Arc) ತನ್ನಸಹದ್ಯೋಗಿಗಳೊಂದಿಗೆ ಡೊಮ್ರಾಮಿಯಿಂದ ವಾಕೌಲಿಯರ್ಸ್ ಗೆ ಪ್ರಯಾಣ ಪ್ರಾರಂಬಿಸಿದಳು. ಅವಳು ಮೊದಲು ಗ್ಯಾರಿಸನ್‌ನ ಕ್ಯಾಪ್ಟನ್ ರಾಬರ್ಟ್ ಡಿ ಬೌಡ್ರಿಕೋರ್ಟ್ ಅವರನ್ನು ಭೇಟಿಯಾಗಿ ಡೌಫಿನ್ ಪರ ಹೋರಾಡಲುಅನುಮತಿಯನ್ನು ಕೋರಿದಳಾದರೂ ಅವನು ಯುವತಿಯನ್ನು ಗಂಭೀರವಾಗಿ ಪರಿಗಣಿಸದೆ ಕಳುಹಿಸಿದನು. ಜನವರಿ 1429 ರಂದು ಜೋನ್ ವಾಕೌಲಿಯರ್ಸ್ ಗೆ ಮರಳಿದರು. ಈ ಸಮಯದಲ್ಲಿ ಓರ್ಲಿಯನ್ಸ್ ಬಳಿ ಫ್ರೆಂಚ್ ಮಿಲಿಟರಿ ಬ್ರಿಟೀಷರಿಂದ ಹಿಮ್ಮೆಟ್ಟಿತು. ಅದನ್ನು ವರದಿ ಮಾಡಲು ಸಂದೇಶವಾಹಕರು ಬರುವ ಹಲವು ದಿನಗಳ ಮೊದಲು ತನ್ನ ಅಂತಃಪ್ರಜ್ಞೆಯಿಂದ ಅದನ್ನು ತಿಳಿದಿದ್ದ ಜೋನ್‌ಳು ರಾಬರ್ಟ್ ಡಿ ಬೌಡ್ರಿಕೋರ್ಟ್ ಗೆ ತನ್ನ ದೈವಿಕ ದರ್ಶನಗಳ ಮೂಲಕ ಆ ಸಂಗತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರಿಂದ ಆತನು ಚಿನೊನ್‌ನಲ್ಲಿದ್ದ ಡೌಫಿನ್‌ನನ್ನು ಭೇಟಿ ಮಾಡಲು ಅವಳಿಗೆ ಅನುಮತಿಸಿದನು.

ಡೌಫಿನ್ ಚಾರ್ಲ್ಸ್ ನೆಲೆಸಿದ್ದ ಕೋಟೆಗೆ ಅವಳನ್ನು ಕರೆದೊಯ್ಯಲಾಯಿತು. ಅವನನ್ನು ಭೇಟಿಯಾದಾಗ ಜೋನ್ ಇಂಗ್ಲಿಷ್ ವಿರುದ್ಧದ ಯುದ್ಧವನ್ನು ಮುನ್ನಡೆಸಲು ಬಯಸಿರುವುದಾಗಿ ಆತನಿಗೆ ಹೇಳಿದಳು. ಡೌಪಿನ್‌ನಿಗೆ ಆಕೆ ಚಿಕ್ಕ ಹುಡುಗಿಯಾಗಿದ್ದರೂ ಅವಳ ಆತ್ಮವಿಶ್ವಾಸದ ಬಗ್ಗೆ ತುಂಬಾ ನಂಬಿಕೆ ಮೂಡಿತು. ಅವಳ ಹಿನ್ನೆಲೆಗೆ ಸಂಬಂಧಿಸಿದಂತೆ ಕೆಲವು ವಿಚಾರಣೆಯ ನಂತರ ಸೈನ್ಯವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಜೋನ್‌ಗೆ ವಹಿಸಲು ಆತ ನಿರ್ಧರಿಸಿದನು. ಡೌಫಿನ್ ಅವಳಿಗೆ ಸೈನ್ಯವನ್ನು ಒದಗಿಸಿದನು, ಜೊತೆಗೆ ಜೀನ್ ಡಿ ಆಲೋನ್‌ಳನ್ನು ಅವಳ ಮಾರ್ಗದರ್ಶಕಿಯಾಗಿ ನೇಮಿಸಿದನು. ಅವಳ ಧೈರ್ಯಶಾಲಿ ಯುವ ಸಹೋದರರಾದ ಜೀನ್ ಮತ್ತು ಪಿಯರೆ ಕೂಡ ಇವಳ ಜೊತೆ ಸೇರಿಕೊಂಡರು. ಯುದ್ಧದಲ್ಲಿ ತಾನು ಬಳಸಲು ಉದ್ದೇಶಿಸಿರುವ ಖಡ್ಗವು ಸೈಂಟ್-ಕ್ಯಾಥರೀನ್-ಡಿ-ಫಿಯರ್‌ ಬೋಯಿಸ್‌ನ ಚರ್ಚ್ ನಲ್ಲಿ ಕಂಡುಬರುತ್ತದೆಂದು ತನ್ನ ಸೈನಿಕರಿಗೆ ಹೇಳಿದ್ದಳು. ಅದು ಅಲ್ಲಿಯೇ ಪತ್ತೆಯಾಯಿತು.

ಜೋನ್‌ಳ ಸೈನ್ಯವು 29 ಏಪ್ರಿಲ್ 1429 ರಂದು ಓರ್ಲಿಯನ್ಸ್ ನಗರಕ್ಕೆ ಬಂದಿತು. ಅಕ್ಟೋಬರ್ 1428 ರಿಂದ ಮುತ್ತಿಗೆ ಹಾಕಲ್ಪಟ್ಟ ಈ ನಗರವನ್ನು ಸಂಪೂರ್ಣವಾಗಿ ಆಂಗ್ಲರು ಸುತ್ತುವರೆದಿದ್ದರು. ಜೋನ್ ನೇತೃತ್ವದ ಫ್ರೆಂಚ್ ಸೈನ್ಯವು ಮೇ 4 ರಂದು ಸೇಂಟ್ ಲೂಪ್ ಕೋಟೆಯ ಮೇಲೆ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡಿತು. ಕೆಲವೇ ದಿನಗಳಲ್ಲಿ ಓರ್ಲಿಯನ್ಸ್ ನ ಮುತ್ತಿಗೆಯನ್ನು ತೆಗೆದುಹಾಕಲಾಯಿತು. ಇದು ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವಿನ ‘ನೂರು ವರ್ಷಗಳ ಕದನ’ಕ್ಕೆ ಒಂದು ಮಹತ್ವದ ತಿರುವು ನೀಡಿತು. ನಂತರದ ದಿನಗಳಲ್ಲಿ ಅವಳು ಹಲವಾರು ಮಿಲಿಟರಿ ಕಾರ್ಯಾಚರಣೆಗಳನ್ನು ಮುನ್ನಡೆಸಿ ಫ್ರೆಂಚ್‌ನ ಅನೇಕ ನಗರಗಳನ್ನು ಇಂಗ್ಲಿಷರಿಂದ ಮುಕ್ತಗೊಳಿಸಿದಳು. ಕೊನೆಗೆ ತನ್ನ ಧೈರ್ಯಶಾಲಿ ವ್ಯಕ್ತಿತ್ವದಿಂದ ಫ್ರೆಂಚ್ ಸೈನ್ಯವನ್ನು ಮುನ್ನಡೆಸಿ ಇಂಗ್ಲಿಷರ ವಿರುದ್ಧ ಹಲವಾರು ಯುದ್ಧಗಳಲ್ಲಿ ಜಯ ಪಡೆದಳು.

ಫ್ರೆಂಚ್ ಪರವಾಗಿನ ಈ ಎಲ್ಲಾ ಬೆಳವಣಿಗೆಗಳು ಡೌಫಿನ್ ಪಟ್ಟಾಭಿಷೇಕಕ್ಕೆ ದಾರಿ ಮಾಡಿಕೊಟ್ಟವು. ಅಂತಿಮವಾಗಿ ಡೌಫಿನ್‌ನಿಗೆ ಜುಲೈ 17, 1429 ರಂದು ರೀಮ್ಸ್ ನಲ್ಲಿ ಫ್ರಾನ್ಸ್ ನ ರಾಜ ಏಳನೇ ಚಾರ್ಲ್ಸ್ ಆಗಿ ಕಿರೀಟಧಾರಣೆ ಮಾಡಿಸಿದಳು. ಆ ಸಂದರ್ಭದಲ್ಲಿ ಜೋನ್ ಡೌಫಿನ್ ಚಾರ್ಲ್ಸ್ ನ ಜೊತೆಗಿದ್ದಳು. ಅವಳು ಯುದ್ಧದಲ್ಲಿ ಪ್ರದರ್ಶಿಸಿದ ಧೈರ್ಯ ಮತ್ತು ಶೌರ್ಯಕ್ಕಾಗಿ ಫ್ರಾನ್ಸ್ ನ ನಾಯಕಿ ಎಂದು ಪ್ರಶಂಸಿಸಲ್ಪಟ್ಟಳು ಮತ್ತು ಅವಳ ಕುಟುಂಬಕ್ಕೆ ಉದಾತ್ತ ಸ್ಥಾನಮಾನ ನೀಡಲಾಯಿತು. ಮೇ 23, 1430 ರಂದು ಅವಳನ್ನು ಬರ್ಗಂಡಿಯನ್ ಬಣವು ಕಂಪೈಗ್ನೆಯಲ್ಲಿ ಸೆರೆ ಹಿಡಿಯಿತು. ಇದು ಇಂಗ್ಲಿಷರೊಡನೆ ಒಪ್ಪಂದ ಮಾಡಿಕೊಂಡಿದ್ದ ರಾಜಕೀಯ ಪಕ್ಷವಾಗಿತ್ತು. ನಂತರ ಆ ಪಕ್ಷವು ಜೋನ್‌ಳನ್ನು ಇಂಗ್ಲಿಷರಿಗೆ ಮಾರಿತು. ಇಂಗ್ಲಿಷರು ಹಲವಾರು ಆರೋಪಗಳಿಗಾಗಿ ಅವಳನ್ನು ವಿಚಾರಣೆಗೆ ಒಳಪಡಿಸಿದರು.

ಅಂತಿಮ ದಿನಗಳು
ಜೋನ್ ಆಫ್ ಆರ್ಕ್ (Joan of Arc) ಧೈರ್ಯದಿಂದ ವಿಚಾರಣೆಯನ್ನು ಎದುರಿಸಿದಳಾದರೂ ನಂತರ ಆಕೆ ತಪ್ಪಿತಸ್ಥಳೆಂದು ಸಾಬೀತಾಯಿತು. ಅದರಿಂದ ಅವಳಿಗೆ ಮರಣದಂಡನೆ ವಿಧಿಸಲಾಯಿತು. ಮೇ 30, 1431 ರಂದು ಅವಳನ್ನು ಸಜೀವವಾಗಿ ಸುಟ್ಟು ಹಾಕಲಾಯಿತು. ಇದಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ನಂತರ ಅವಳ ಚಿತಾಭಸ್ಮವನ್ನು ಸೀನ್‌ನಲ್ಲಿ ಹರಡಲಾಯಿತು. ಅವರ ಮರಣದ ನಂತರವೂ ‘ನೂರು ವರ್ಷಗಳ ಯುದ್ಧ’ 22 ವರ್ಷಗಳ ಕಾಲ ಮುಂದುವರೆಯಿತು. ಯುದ್ಧದ ನಂತರ ಜೋನ್ ಆಫ್ ಆರ್ಕ್ ನ ಮರಣೋತ್ತರ ವಿಚಾರಣೆಗೆ ಆದೇಶಿಸಲಾಯಿತು. ವಿಚಾರಣೆಯಲ್ಲಿಆಕೆ ನಿರಪರಾಧಿ ಎಂದು ಘೋಷಿಸಿದರು. ನಂತರ ಜುಲೈ 7, 1456 ರಂದು ಅವಳನ್ನು ಹುತಾತ್ಮಳೆಂದು ಘೋಷಿಸಲಾಯಿತು. 16ನೇ ಶತಮಾನದಲ್ಲಿ ಜೋನ್ ಆಫ್ ಆರ್ಕ್ ‘ಕ್ಯಾಥೋಲಿಕ್ ಲೀಗ್’ನ ಸಂಕೇತವಾದಳು. ಇದನ್ನು 16 ಮೇ 1920 ರಂದು ಅಂಗೀಕರಿಸಲಾಯಿತು. ಫ್ರಾನ್ಸ್ ನ ಒಂಬತ್ತು ದ್ವಿತೀಯ ಪೋಷಕ ಸಂತರಲ್ಲಿ ಈಕೆಯೂ ಒಬ್ಬಳು. ಅರೆ ಪೌರಾಣಿಕ ವ್ಯಕ್ತಿಯಾಗಿ ಅವಳನ್ನು ಧೈರ್ಯದ ಸಂಕೇತವೆಂದು ಪರಿಗಣಿಸಲಾಗಿದೆ. ಅವಳು ಸಾವಿನ ನಂತರ ಹಲವಾರು ಸಾಹಿತ್ಯ, ಕಲೆ ಮತ್ತು ಇತರ ಸಾಂಸ್ಕೃತಿಕ ಕೃತಿಗಳ ವಿಷಯವಾಗಿದ್ದಾಳೆ.

# ಜೋನ್ ಆಫ್ ಆರ್ಕ್

# Joan of Arc

# ಕನ್ನಡ ಬುಟ್ಟಿ

# Kannada Butti