ಜಾರ್ಜ್ ವಾಷಿಂಗ್ಟನ್ (George Washington)

ಜಾರ್ಜ್ ವಾಷಿಂಗ್ಟನ್ (George Washington) ‘ಯುನೈಟೆಡ್ ಸ್ಟೇಟ್ಸ್’ನ ಮೊದಲ ಅಧ್ಯಕ್ಷ ಮತ್ತು ಅದರ ಸ್ಥಾಪಕ ‘ಪಿತಾಮಹ’ರಲ್ಲಿ ಒಬ್ಬ. ಅವನು ‘ಅಮೆರಿಕನ್ ಕ್ರಾಂತಿಕಾರಿ ಯುದ್ಧ’ದಲ್ಲಿ ಗ್ರೇಟ್ ಬ್ರಿಟನ್ ಸಾಮ್ರಾಜ್ಯದ ವಿರುದ್ಧ ‘ಕಾಂಟಿನೆಂಟಲ್ ಆರ್ಮಿ’ಯನ್ನು ವಿಜಯದತ್ತ ಕೊಂಡೊಯ್ದವನು. ಅಲ್ಲದೆ ತಮ್ಮ ರಾಷ್ಟ್ರವನ್ನು ಅತ್ಯಂತ ನಿರ್ಣಾಯಕ ಸಮಯದಲ್ಲಿ ಸನ್ನಿಹಿತವಾದ ಕುಸಿತದಿಂದ ರಕ್ಷಿಸಿದವನು. 11 ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಜಾರ್ಜ್ ವಾಷಿಂಗ್ಟನ್ ತನ್ನ ಹಿರಿಯ ಅಣ್ಣನ ಪೋಷಣೆಯ ಅಡಿಯಲ್ಲಿ ಬೆಳೆದನು. ತನ್ನ 15 ನೇ ವಯಸ್ಸಿನಲ್ಲಿ ಯಶಸ್ವಿ ಸರ್ವೇಯರ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದನು. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆತ ಕಠಿಣವಾಗುವಂತೆ ಮಾಡಿತು. ಅಲ್ಲದೆ ಅಂತಿಮವಾಗಿ ವಿಸ್ತರಿಸುತ್ತಿರುವ ಫ್ರೆಂಚ್ ಸೈನ್ಯವನ್ನು ಎದುರಿಸಲು ಓಹಿಯೋ ಕೌಂಟಿಗೆ ಕಠಿಣವಾದ ಮೆರವಣಿಗೆಯನ್ನು ನಡೆಸಲು ಅನುವು ಮಾಡಿಕೊಟ್ಟಿತು. ನಂತರ ‘ಅಮೇರಿಕನ್ ಕ್ರಾಂತಿ’ ಪ್ರಾರಂಭವಾಗುತ್ತಿದ್ದಂತೆ ಅವರನ್ನು ತರಬೇತಿ ಪಡೆದ ಮತ್ತು ಸುಸಜ್ಜಿತ ‘ಕಾಂಟಿನೆಂಟಲ್ ಆರ್ಮಿ’ಯ ಕಮಾಂಡರ್-ಇನ್-ಚೀಫ್ ಆಗಿ ನೇಮಿಸಲಾಯಿತು. ಈತ ತನ್ನ ಸೈನ್ಯವನ್ನು ಮುನ್ನಡೆಸುತ್ತಾ ಯಾರ್ಕ್ಟೌನ್‌ನಲ್ಲಿ ಬ್ರಿಟಿಷ್ ಪಡೆಗಳನ್ನು ಸೋಲಿಸಿದನು. ನಂತರ ಮನೆಗೆ ಮರಳಿ ರೈತ ಜೀವನ ನಡೆಸಲು ನಿರ್ಧರಿಸಿದನು. ಆದರೆ ಯುನೈಟೆಡ್ ಸ್ಟೇಟ್ಸ್ ನ ಮೊದಲ ಅಧ್ಯಕ್ಷರಾಗಬೇಕೆಂದು ಅವನನ್ನು ಮನವೊಲಿಸಲಾಯಿತು. ಎಂಟು ವರ್ಷಗಳ ಕಾಲ ಹೊಸದಾಗಿ ಉದಯೋನ್ಮುಖ ದೇಶವನ್ನು ದೃಢತೆ ಮತ್ತು ವಿವೇಕದಿಂದ ಆಳಿ ಸ್ಥಿರತೆಯನ್ನು ತರಲು ಆದ್ಯತೆ ನೀಡಿದನು. ಅವನ ಅಧ್ಯಕ್ಷತೆಯು ಅಮೆರಿಕಾವನ್ನು ವಿಶ್ವದ ಪ್ರಮುಖ ಶಕ್ತಿಯಾಗಿಸಲು ಅಡಿಪಾಯ ಹಾಕಿತು. ಇವನು ಅಮೆರಿಕಾ ಇತಿಹಾಸದಲ್ಲಿ ಶ್ರೇಷ್ಠ ಅಧ್ಯಕ್ಷರಲ್ಲಿ ಒಬ್ಬನಾಗಿ ಹೊರಹೊಮ್ಮಿದನು.

ಬಾಲ್ಯ ಮತ್ತು ಆರಂಭಿಕ ವರ್ಷಗಳು
ಜಾರ್ಜ್ ವಾಷಿಂಗ್ಟನ್ (George Washington) ಫೆಬ್ರವರಿ 22, 1732 ರಂದು ವರ್ಜೀನಿಯಾದ ವೆಸ್ಟ್ಮೋರ್ಲ್ಯಾಂಡ್ ಕೌಂಟಿಯ ‘ಪೋಪ್ಸ್ ಕ್ರೀಕ್ ಎಸ್ಟೇಟ್’ನಲ್ಲಿ ಜನಿಸಿದನು. ಮುಖ್ಯವಾಗಿ ಈತ ಇಂಗ್ಲಿಷ್ ಮೂಲದವನು. ಅವನ ತಂದೆ ಅಗಸ್ಟೀನ್ ವಾಷಿಂಗ್ಟನ್ ಮಧ್ಯಮ ವರ್ಗಕ್ಕೆ ಸೇರಿದ ತಂಬಾಕು ತೋಟಗಾರರಾಗಿದ್ದರು. ಜೊತೆಗೆ ವಿವಿಧ ಸ್ಥಳಗಳಲ್ಲಿ ಅಪಾರ ಆಸ್ತಿಗಳನ್ನು ಹೊಂದಿದ್ದರು. ಜಾರ್ಜ್ ಅವರ ತಾಯಿ ‘ಮೇರಿ ಬಾಲ್’ ಅಗಸ್ಟೀನ್ ವಾಷಿಂಗ್ಟನ್‌ನ ಎರಡನೇ ಪತ್ನಿ. ಜಾರ್ಜ್ ತನ್ನ ಹೆತ್ತವರ ಆರು ಮಕ್ಕಳಲ್ಲಿ ಹಿರಿಯ ಮಗನಾಗಿದ್ದನು. ಅವನ ಒಡಹುಟ್ಟಿದವರಲ್ಲಿ ಒಬ್ಬ ಶೈಶವಾವಸ್ಥೆಯಲ್ಲಿಯೇ ಸಾವನ್ನಪ್ಪಿದ್ದನು. ಕೊನೆಗೆ ಬೆಟ್ಟಿ ವಾಷಿಂಗ್ಟನ್ ಲೂಯಿಸ್, ಸ್ಯಾಮ್ಯುಯೆಲ್ ವಾಷಿಂಗ್ಟನ್, ಜಾನ್ ಅಗಸ್ಟೀನ್ ವಾಷಿಂಗ್ಟನ್ ಮತ್ತು ಚಾರ್ಲ್ಸ್ ವಾಷಿಂಗ್ಟನ್ ಎಂಬ ನಾಲ್ಕು ಜನ ಸಹೋದರರು ಉಳಿದುಕೊಂಡರು. ಇದಲ್ಲದೆ ಜೇನ್ ಬಟ್ಲರ್‌ಳೊಂದಿಗಿನ ತನ್ನ ತಂದೆಯ ಮೊದಲ ಮದುವೆಯಿಂದ ಅವನಿಗೆ ಇಬ್ಬರು ಹಿರಿಯ ಸಹೋದರರಾದ ಲಾರೆನ್ಸ್ ವಾಷಿಂಗ್ಟನ್ ಮತ್ತು ಅಗಸ್ಟೀನ್ ವಾಷಿಂಗ್ಟನ್ ಜೂನಿಯರ್ ಇದ್ದರು.

ಜಾರ್ಜ್ ವಾಷಿಂಗ್ಟನ್ (George Washington) ತನ್ನ ಬಾಲ್ಯದ ಬಹುಭಾಗವನ್ನು ವರ್ಜೀನಿಯಾದ ಫ್ರೆಡೆರಿಕ್ಸ್ ಬರ್ಗ್ ನ ಎದುರು ರಾಪ್ಪಹನ್ನೋಕ್ ನದಿಯ ಉತ್ತರ ದಂಡೆಯಲ್ಲಿದ್ದ ‘ಫೆರ್ರಿ ಫಾರ್ಮ್’ನಲ್ಲಿ ಕಳೆದನು. ಅವನು ಮನೆಯಲ್ಲಿಯೇ ಶಿಕ್ಷಣವನ್ನು ಪ್ರಾರಂಭಿಸಿದನು. ನಂತರ ಏಳರಿಂದ ಹದಿನೈದನೇ ವಯಸ್ಸಿನವರೆಗೆ ಅನಿಯಮಿತವಾಗಿ ಶಾಲೆಗೆ ಹೋದನು. ತಂದೆ 1743 ರಲ್ಲಿ ನಿಧನರಾದ್ದರಿಂದ ಅವನು ವಿದೇಶಿ ಶಿಕ್ಷಣದಿಂದ ವಂಚಿತನಾದನು. ತನ್ನ ತಂದೆಯ ಮರಣದ ನಂತರ ಅವನ ಅಣ್ಣ ಲಾರೆನ್ಸ್ ವಾಷಿಂಗ್ಟನ್ ಈತನ ರಕ್ಷಕರಾದರು. ಹೆಚ್ಚಾಗಿ ಮೌಂಟ್ ವರ್ನನ್‌ನಲಿದ್ದ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದ ಜಾರ್ಜ್ ಸೋದರ ಮತ್ತು ಅತ್ತಿಗೆಯಿಂದ ಮಾತ್ರವಲ್ಲದೆ ಅವನ ಸುತ್ತಮುತ್ತಲಿನವರಿಂದಲೂ ಸಾಕಷ್ಟು ಪ್ರಭಾವಿತನಾದನು.

15ನೇ ವಯಸ್ಸಿಗೆ ಜಾರ್ಜ್ ವಾಷಿಂಗ್ಟನ್ ತನ್ನ ಔಪಚಾರಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದನು. ನಂತರ ಈ ಹಿಂದೆ ‘ರಾಯಲ್ ನೇವಿ’ಯಲ್ಲಿ ಸೇವೆ ಸಲ್ಲಿಸಿದ್ದ ಲಾರೆನ್ಸ್ ನನ್ನು ಜಾರ್ಜ್ ವಾಷಿಂಗ್‌ಟನ್‌ಗೆ ಅದೇ ಯುದ್ಧ ಪಡೆಯಲ್ಲಿ ಒಂದು ಹುದ್ದೆಯನ್ನು ಕೊಡಿಸುವ ಬಗ್ಗೆ ಯೋಚಿಸಿದನು. ಆದರೆ ಅವನ ತಾಯಿ ಆಕ್ಷೇಪಿಸಿದಾಗ ಪ್ರಸ್ತಾಪವನ್ನು ಕೈಬಿಡಲಾಯಿತು. ಬದಲಾಗಿ ಸರ್ವೇಯರ್ ಆಗಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದನು. 1751 ರಲ್ಲಿ ವಾಷಿಂಗ್ಟನ್ ತನ್ನ ಅಣ್ಣ ಲಾರೆನ್ಸ್ ನೊಂದಿಗೆ ಬಾರ್ಬಡೋಸ್‌ಗೆ ಹೋಗಿ ವಿದೇಶದ ತಮ್ಮ ಏಕೈಕ ಪ್ರವಾಸವನ್ನು ಮುಗಿಸಿದನು.

ಸರ್ವೇಯರ್
1748 ರಲ್ಲಿ ಜಾರ್ಜ್ ವಾಷಿಂಗ್ಟನ್ (George Washington) ತನ್ನ ಸ್ನೇಹಿತ ಮತ್ತು ನೆರೆಹೊರೆಯ ಜಾರ್ಜ್ ಫೇರ್‌ಫ್ಯಾಕ್ಸ್ ಆಯೋಜಿಸಿದ್ದ ವೃತ್ತಿಪರ ಸಮೀಕ್ಷಾ ತಂಡಕ್ಕೆ ಸೇರಿಕೊಂಡನು. ಆತನೊಂದಿಗೆ ಸೇರಿ ಜಾರ್ಜ್ ವರ್ಜೀನಿಯಾದ ಪಶ್ಚಿಮ ಗಡಿಯುದ್ದಕ್ಕೂ ಒಂದು ದೊಡ್ಡ ಭೂಪ್ರದೇಶವನ್ನು ಸಮೀಕ್ಷೆ ಮಾಡಿದುದರ ಜೊತೆಗ ಅವರ ಅಮೂಲ್ಯವಾದ ಅನುಭವಗಳನ್ನು ಅಳವಡಿಸಿಕೊಂಡನು. 1749 ರ ಹೊತ್ತಿಗೆ ‘ಕಾಲೇಜ್ ಆಫ್ ವಿಲಿಯಂ & ಮೇರಿ’ಯಿಂದ ಸರ್ವೇಯರ್ ಪರವಾನಗಿಯನ್ನು ಪಡೆದನು. ತರುವಾಯ ಕಲ್ಪೆಪರ್ ಕೌಂಟಿಯಲ್ಲಿ ಸರ್ವೇಯರ್ ಆಗಿ ಅಧಿಕೃತ ನೇಮಕಾತಿಯನ್ನು ಪಡೆದನು. ಅವನ ಮೊದಲ ಹುದ್ದೆಯ ಕರ್ತವ್ಯ 400 ಎಕರೆ ಭೂಮಿಯನ್ನು ಕ್ರಮವಾಗಿ ಯೋಜಿಸುವುದಾಗಿತ್ತು. ಅದನ್ನು ಆತ ಎರಡು ದಿನಗಳಲ್ಲಿ ಪೂರ್ಣಗೊಳಿಸಿದನು. ಮುಂದಿನ ಎರಡು ವರ್ಷಗಳ ಕಾಲ ಕಲ್ಪೆಪರ್, ಫ್ರೆಡೆರಿಕ್ ಮತ್ತು ಅಗಸ್ಟಾ ಕೌಂಟಿಗಳಲ್ಲಿ ಸರ್ವೇಯರ್ ಆಗಿ ಕೆಲಸ ಮಾಡಿದನು.1752 ರ ಹೊತ್ತಿಗೆ ಸುಮಾರು 200 ಸಮೀಕ್ಷೆಗಳನ್ನು ಪೂರ್ಣಗೊಳಿಸಿದನು. ಅದು 60,000 ಎಕರೆ ಭೂಮಿಯನ್ನು ಒಳಗೊಂಡಿತ್ತು. ಅದರ ಪ್ರತಿಫಲವಾಗಿ ಒಂದು ತುಂಡು ಭೂಮಿಯನ್ನು ಖರೀದಿಸಲು ಸಾಕಷ್ಟು ಹಣವನ್ನು ಗಳಿಸಿದನು.

ಮೌಂಟ್ ವರ್ನಾನ್ ಮತ್ತು ಮಿಲಿಟರಿ ಸೇವೆ
ಜುಲೈ 1752 ರಲ್ಲಿ ಅವನ ಅಣ್ಣ ಲಾರೆನ್ಸ್ ಕ್ಷಯ ರೋಗದಿಂದ ನಿಧನನಾದನು. ಲಾರೆನ್ಸ್ ನ ಮಗಳು ಸಾರಾ ಮೌಂಟ್ ವರ್ನಾನ್ ಎಸ್ಟೇಟ್‌ನ್ನು ಅನುವಂಶಿಕವಾಗಿ ಪಡೆದಳು. ಆದರೆ ಅವಳು ಎರಡು ತಿಂಗಳ ನಂತರ ಮರಣಹೊಂದಿದಾಗ 20 ವರ್ಷದ ವಾಷಿಂಗ್ಟನ್ ಅದರ ಮಾಲೀಕನಾದನು. ನಂತರ ಡಿಸೆಂಬರ್‌ನಲ್ಲಿ ವಾಷಿಂಗ್ಟನ್ ವರ್ಜೀನಿಯಾ ಮಿಲಿಟಿಯಾದಲ್ಲಿ ಮೇಜರ್ ಆಗಿ ನೇಮಕಗೊಂಡನು. 1750 ರ ದಶಕದ ಆರಂಭದ ವೇಳೆಗೆ ಫ್ರೆಂಚ್ ಜನರು ತಮ್ಮ ಪ್ರದೇಶವನ್ನು ಈಗ ಪೆನ್ಸಿಲ್ವೇನಿಯಾ ಎಂದು ಕರೆಯುವ ಪ್ರದೇಶಗಳಲ್ಲಿ ವಿಸ್ತರಿಸಲು ಪ್ರಾರಂಭಿಸಿದರು. ಅಕ್ಟೋಬರ್ 31, 1753 ರಂದು ವರ್ಜೀನಿಯಾದ ಲೆಫ್ಟಿನೆಂಟ್ ಗವರ್ನರ್ ರಾಬರ್ಟ್ ಡಿನ್ವಿಡ್ಡಿ ವಾಷಿಂಗ್ಟನ್‌ನನ್ನು ‘ಫೋರ್ಟ್ ಲೆ ಬೋಯೆಫ್’ಗೆ (ಈಗ ಪೆನ್ಸಿಲ್ವೇನಿಯಾದ ವಾಟರ್‌ಫೋರ್ಡ್) ಕಳುಹಿಸಿದನು. ಅಲ್ಲಿ ಆತ ಬ್ರಿಟಿಷ್ ಬೇಡಿಕೆಯನ್ನು ಪೂರೈಸಿದನು. ಈ ಪ್ರದೇಶವು ಬ್ರಿಟಿಷರಿಗೆ ಸೇರಿದ ಕಾರಣ ಫ್ರೆಂಚರು ಹೊರಹೋಗುವಂತೆ ಕೇಳಿಕೊಂಡನು.

ಫ್ರೆಂಚರು ಒಪ್ಪದಿದ್ದಾಗ ಜಾರ್ಜ್ ವಾಷಿಂಗ್ಟನ್ (George Washington) ಆಗಿನ ವರ್ಜೀನಿಯಾದ ರಾಜಧಾನಿ ವಿಲಿಯಮ್ಸ್ ಬರ್ಗ್ ಗೆ ಮರಳಿದನು. ಈ ಸುದ್ದಿ ಕೇಳಿದ ದಿನ್ವಿಡ್ಡಿ ವಾಷಿಂಗ್ಟನ್‌ನನ್ನು ಸೈನ್ಯದೊಂದಿಗೆ ವಾಪಸ್ ಕಳುಹಿಸಿ ಪ್ರಸ್ತುತ ಪೆನ್ಸಿಲ್ವೇನಿಯಾದ ಫಯೆಟ್ಟೆ ಕೌಂಟಿಯಲ್ಲಿರುವ ಗ್ರೇಟ್ ಮೆಡೋಸ್‌ನಲ್ಲಿ ನೆಲೆ ಸ್ಥಾಪಿಸಲು ಸೂಚಿಸಿದನು. ವಾಷಿಂಗ್ಟನ್ ತನ್ನ ಗಮ್ಯಸ್ಥಾನವನ್ನು ತಲುಪಿದ ನಂತರ ಫ್ರೆಂಚರು ವ್ಯಾಪಾರಿಗಳನ್ನು ಓಡಿಸಿ ಕೋಟೆಯನ್ನು ನಿರ್ಮಿಸುತ್ತಿರುವುದನ್ನು ಕಂಡುಕೊಂಡನು. ಅವನ ಪಡೆಗಳು ಮೇ 28, 1754 ರಂದು ‘ಫೋರ್ಟ್ ಡುಕ್ವೆಸ್ನೆ’ಯಲ್ಲಿ ಫ್ರೆಂಚ್ ನೆಲೆ ಮೇಲೆ ದಾಳಿ ನಡೆಸಿ ಕಮಾಂಡರ್ ‘ಕೂಲನ್ ಡಿ ಜುಮನ್ವಿಲ್ಲೆ’ ಸೇರಿದಂತೆ 10 ಫ್ರೆಂಚ್ ಸೈನಿಕರನ್ನು ಕೊಂದವು. ಉಳಿದವರನ್ನು ಖೈದಿಗಳಾಗಿ ಕರೆದೊಯ್ಯಲಾಯಿತು. 1755 ರಲ್ಲಿ ‘ಫೋರ್ಟ್ ನೆಸೆಸಿಟಿ’ಯಲ್ಲಿ ಸೋತ ನಂತರವೂ ಸಹ ವಾಷಿಂಗ್ಟನ್‌ನ್ನು ‘ವರ್ಜೀನಿಯಾ ರೆಜಿಮೆಂಟ್‌ನ ಕರ್ನಲ್ ಮತ್ತು ಕಮಾಂಡರ್ ಇನ್ ಚೀಫ್’ ಆಗಿ ನೇಮಿಸಲಾಯಿತು. ಈ ರೆಜಿಮೆಂಟ್ ಅನೇಕ ಯುದ್ಧಗಳನ್ನು ಗೆದ್ದದ್ದರಿಂದ ಅವನಿಗೆ ಮತ್ತೆ ವೈಭವ ಪ್ರಾಪ್ತವಾಯಿತು.

ಪ್ಲಾಂಟರ್ ಮತ್ತು ರಾಜಕಾರಣಿ
1758 ರಲ್ಲಿ ಜಾರ್ಜ್ ವಾಷಿಂಗ್ಟನ್ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಮೌಂಟ್ ವೆರ್ನಾನ್‌ಗೆ ಮರಳಿದನು. ಅಲ್ಲಿ ಒಬ್ಬ ಪ್ಲಾಂಟರ್ ಮತ್ತು ರಾಜಕಾರಣಿಯಾಗಿ ಬದಲಾದನು. ಕೆಲವೇ ವರ್ಷಗಳಲ್ಲಿ ಜಮೀನನ್ನು 2,000 ಎಕರೆಗಳಿಂದ 8,000 ಎಕರೆಗೆ ಹೆಚ್ಚಿಸಿದನು. 1759 ರಲ್ಲಿ ಮಾರ್ಥಾ ಡ್ಯಾಂಡ್ರಿಡ್ಜ್ ಕಸ್ಟಿಸ್‌ಳೊಂದಿಗಿನ ವಿವಾಹವು ಅವನ ಭೂಸ್ವಾಮ್ಯವನ್ನು ಹೆಚ್ಚಿಸಲು ಸಹಕಾರಿಯಾಯಿತು. ಆರಂಭದಲ್ಲಿ ತಂಬಾಕು ಮಾತ್ರ ಬೆಳೆದನಾದರೂ 1766 ರಿಂದ ವಾಷಿಂಗ್ಟನ್ ಗೋಧಿಯನ್ನು ಬೆಳೆಯಲು ಪ್ರಾರಂಭಿಸಿದನು. ತಮ್ಮ ಉತ್ಪನ್ನಗಳನ್ನು ವಸಾಹತು ಪ್ರದೇಶದ ಇತರ ಭಾಗಗಳಿಗೆ ಮಾರಾಟ ಮಾಡುವ ಮೊದಲು ಸಂಸ್ಕರಿಸಲು ಪ್ರಾರಂಭಿಸಿದನು. ಜೊತೆಗೆ ಮೀನುಗಾರಿಕೆ, ಕುದುರೆ ಸಂತಾನೋತ್ಪತ್ತಿ, ನೂಲುವ ಮತ್ತು ನೇಯ್ಗೆಯ ಕೆಲಸಗಳನ್ನು ಪ್ರಾರಂಭಿಸಿದನು. 1790 ರಲ್ಲಿ ಒಂದು ಡಿಸ್ಟಿಲರಿಯನ್ನು ಸಹ ಸ್ಥಾಪಿಸಿದನು.

ಏತನ್ಮಧ್ಯೆ 1758 ರಲ್ಲಿ ವರ್ಜೀನಿಯಾದ ಪ್ರಾಂತೀಯ ಶಾಸಕಾಂಗಕ್ಕೆ ಪ್ರವೇಶಿಸಿ ‘ಹೌಸ್ ಆಫ್ ಬರ್ಗೆಸಸ್’ನ ಪ್ರತಿನಿದಿಯಾಗಿ 1774  ರವರೆಗೆ ಸೇವೆ ಸಲ್ಲಿಸಿದನು. 1767 ರಲ್ಲಿ ಬ್ರಿಟಿಷ್ ಸಂಸತ್ತಿನಲ್ಲಿ ‘ಟೌನ್‌ಶೆಂಡ್ ಆಕ್ಟ್’ ಜಾರಿಗೆ ಬಂದಾಗ ವಸಾಹತುಶಾಹಿ ಪ್ರತಿರೋಧದಲ್ಲಿ ವಾಷಿಂಗ್ಟನ್ ಪ್ರಮುಖ ಪಾತ್ರ ವಹಿಸಿದನು. ಮೇ 1769 ರಲ್ಲಿ ಕಾಯಿದೆಗಳನ್ನು ರದ್ದುಗೊಳಿಸುವವರೆಗೂ ಇಂಗ್ಲಿಷ್ ಸರಕುಗಳನ್ನು ಬಹಿಷ್ಕರಿಸುವ ಪ್ರಸ್ತಾಪವನ್ನು ಪರಿಚಯಿಸಿದನು. 1774 ರಲ್ಲಿ ವರ್ಜೀನಿಯಾದ ಪ್ರತಿನಿಧಿಯಾಗಿ ಫಿಲಡೆಲ್ಫಿಯಾದಲ್ಲಿ ನಡೆದ ‘ಮೊದಲ ಕಾಂಟಿನೆಂಟಲ್ ಕಾಂಗ್ರೆಸ್’ಗೆ ಸೇರಿದನು. 1775 ರಲ್ಲಿ ವಾಷಿಂಗ್ಟನ್‌ನನ್ನು ನ್ಯೂಯಾರ್ಕ್ ನ ಮಿಲಿಟರಿ ಸಲಹೆಗಾರನಾಗಿ ನೇಮಿಸಲಾಯಿತು. ಕೆಲವು ತಿಂಗಳ ನಂತರ ನಡೆದ ‘ಎರಡನೇ ಕಾಂಟಿನೆಂಟಲ್ ಕಾಂಗ್ರೆಸ್’ನಲ್ಲಿ ಇಡೀ ಮಿಲಿಟರಿಯ ಕಮಾಂಡರ್-ಇನ್-ಚೀಫ್ ಆಗಿ ನೇಮಿಸಲಾಯಿತು.

ಅಮೆರಿಕನ್ ಕ್ರಾಂತಿ
ಜಾರ್ಜ್ ವಾಷಿಂಗ್ಟನ್ (George Washington) ಜುಲೈ 1775 ರ ಬೋಸ್ಟನ್‌ನ ಮುತ್ತಿಗೆಯ ಸಮಯದಲ್ಲಿ ‘ಕಾಂಟಿನೆಂಟಲ್ ಆರ್ಮಿ’ಯ ಅಧಿಪತ್ಯ ವಹಿಸಿಕೊಂಡನು. ಎಂಟು ವರ್ಷಗಳ ಕಾಲ ನಡೆದ ಭೀಕರ ಯುದ್ಧದಲ್ಲಿ ಅತ್ಯುತ್ತಮ ಜನರಲ್ ಎಂದು ಸಾಬೀತು ಪಡಿಸಿದನು. ತಮ್ಮ ಸುಸಜ್ಜಿತ ಸೈನ್ಯವನ್ನು ಮುನ್ನಡೆಸಿ ಸೈನಿಕರನ್ನು ನಿರಂತರವಾಗಿ ಪ್ರೇರೇಪಿಸಿದನು. ಆರಂಭದಲ್ಲಿ ಅವನು ಗೆದ್ದದ್ದಕ್ಕಿಂತ ಹೆಚ್ಚಿನ ಯುದ್ಧಗಳನ್ನು ಕಳೆದುಕೊಂಡನಾದರೂ ತನ್ನ ಸ್ಥಾನವನ್ನು ಬಿಟ್ಟುಕೊಡದೆ ಹೋರಾಟವನ್ನು ಮುಂದುವರೆಸಿದನು. ಈ ಸಮಯದಲ್ಲಿ ಅವನ ಮುಖ್ಯ ತಂತ್ರವೆಂದರೆ ಬ್ರಿಟಿಷ್ ಸೈನಿಕರಿಗೆ ನಿರಂತರವಾಗಿ ಕಿರುಕುಳ ನೀಡಿ ಅವರ ಗುರಿಯನ್ನು ತಪ್ಪಿಸುವುದಾಗಿತ್ತು. ಇದರ ಜೊತೆಗೆ ವಾಷಿಂಗ್ಟನ್ ತನ್ನ ಸೈನ್ಯವನ್ನು ಮರು ಸಂಘಟಿಸಿ ಅದಕ್ಕೆ ಬೇಕಾದ ಸೂಕ್ತ ತರಬೇತಿ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಿದನು. 1781 ರ ಅಕ್ಟೋಬರ್‌ನಲ್ಲಿ ಯಾರ್ಕ್ಟೌನ್‌ನಲ್ಲಿ ಬೀಡು ಬಿಟ್ಟಿದ್ದ ಬ್ರಿಟಿಷ್ ಸೈನ್ಯವನ್ನು ಕಾಂಟಿನೆಂಟಲ್ ಪಡೆಗಳು ವಶಪಡಿಸಿಕೊಂಡಾಗ ಯುದ್ಧವು ಕೊನೆಗೊಂಡಿತು. ಇದು ವಾಷಿಂಗ್ಟನ್‌ನನ್ನು ರಾಷ್ಟ್ರೀಯ ವೀರನನ್ನಾಗಿ ಮಾಡಿತು. ಸೆಪ್ಟೆಂಬರ್ 3, 1783 ರಂದು ‘ಪ್ಯಾರಿಸ್ ಒಪ್ಪಂದ’ಕ್ಕೆ ಸಹಿ ಹಾಕುವವರೆಗೂ ವಾಷಿಂಗ್ಟನ್ ಕಮಾಂಡರ್-ಇನ್-ಚೀಫ್ ಆಗಿ ಕಾರ್ಯ ನಿರ್ವಹಿಸುತ್ತಲೇ ಇದ್ದನು. ನಂತರ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ವರ್ನಾನ್ ಪರ್ವತಕ್ಕೆ ಮರಳಿದನು.

ಯು.ಎಸ್.ಎ. ಅಧ್ಯಕ್ಷ
ಯುದ್ಧದ ನಂತರ ಜಾರ್ಜ್ ವಾಷಿಂಗ್ಟನ್ (George Washington) ಒಬ್ಬ ಪ್ಲಾಂಟರ್ ಆಗಿ ಜೀವನವನ್ನು ಪುನರಾರಂಭಿಸಲು ಆಶಿಸಿದನು. ಅಲ್ಲಿ ಅವನ ದೀರ್ಘ ಅನುಪಸ್ಥಿತಿಯಿಂದ ಉಂಟಾದ ಹಾನಿಗಳನ್ನು ಸರಿಪಡಿಸಲು ಪ್ರಯತ್ನಿಸಿದನು. ಆದಾಗ್ಯೂ ಆತ ರಾಷ್ಟ್ರೀಯ ರಾಜಕಾರಣದ ಮೇಲೆ ಕಣ್ಣಿಟ್ಟು 1785 ರಲ್ಲಿ ತನ್ನ ಎಸ್ಟೇಟ್‌ನಲ್ಲಿ ‘ಮೌಂಟ್ ವೆರ್ನಾನ್ ಸಮ್ಮೇಳನವನ್ನು’ ಆಯೋಜಿಸಿದನು. 1786 ರ ‘ಅನ್ನಾಪೊಲಿಸ್ ಸಮಾವೇಶ’ದ ಅಧ್ಯಕ್ಷತೆ ವಹಿಸಿಕೊಳ್ಳಲಿಲ್ಲ. 1787 ರಲ್ಲಿ ಫಿಲಡೆಲ್ಫಿಯಾದಲ್ಲಿ ‘ಸಾಂವಿಧಾನಿಕ ಸಮಾವೇಶ’ ನಡೆದಾಗ ಅಧ್ಯಕ್ಷತೆಯನ್ನು ವಹಿಸಲು ವಾಷಿಂಗ್ಟನ್ ಒಪ್ಪಿದನು. ಆತನ ಪ್ರಭಾವಶಾಲಿ ನಾಯಕತ್ವ ಗುಣವು ದೇಶದ ಮೊದಲ ಅಧ್ಯಕ್ಷರಾಗಲು ಅತ್ಯಂತ ಸೂಕ್ತ ವ್ಯಕ್ತಿ ಎಂದು ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟಿತು. ಜನವರಿ 7, 1789 ರಂದು ನಡೆದ ಮೊದಲ ಅಧ್ಯಕ್ಷೀಯ ಚುನಾವಣೆಯಲ್ಲಿ ವಾಷಿಂಗ್ಟನ್ ಗೆದ್ದು ಏಪ್ರಿಲ್ 30, 1789 ರಂದು ನ್ಯೂಯಾರ್ಕ್ ನಗರದ ‘ಫೆಡರಲ್ ಹಾಲ್’ನ ಬಾಲ್ಕನಿಯಲ್ಲಿ ದೇಶದ ಮೊದಲ ಅಧ್ಯಕ್ಷನಾಗಿ ಪ್ರಮಾಣ ವಚನ ಸ್ವೀಕರಿಸಿದನು.

ಅಧ್ಯಕ್ಷತೆಯ ಆರಂಭದ ದಿನಗಳಲ್ಲಿ ಆತ ಸಮರ್ಥ ಮತ್ತು ದೂರದೃಷ್ಟಿಯ ನಿರ್ವಾಹಕನೆಂದು ಸಾಬೀತು ಪಡಿಸಿದನು. ವಾರ್ಷಿಕ 25,000 ವೇತನವನ್ನು ಅಧ್ಯಕ್ಷರಿಗೆ ನಿಗಧಿಪಡಿಸಲಾಯಿತು. ಹೊಸ ಸಂವಿಧಾನವನ್ನು ಕಾರ್ಯಸಾಧ್ಯವಾದ ಸಾಧನವಾಗಿ ರಚಿಸಿ ಏಕಕಾಲದಲ್ಲಿ ಸಮಗ್ರತೆಯನ್ನು ಎತ್ತಿಹಿಡಿದನು. ಸೆನೆಟ್ ಅಧ್ಯಕ್ಷರಿಗೆ ಹೆಚ್ಚು ಭವ್ಯವಾದ ಶೀರ್ಷಿಕೆಗಳನ್ನು ಪ್ರಸ್ತಾಪಿಸಿದರಾದರೂ ಎಲ್ಲವನ್ನು ನಿರಾಕರಿಸಿ ‘ಮಿಸ್ಟರ್’ ಎಂದು ಕರೆಯಲು ಆದ್ಯತೆ ನೀಡಿದನು. ವಾಷಿಂಗ್ಟನ್ 1792 ರಲ್ಲಿ ತನ್ನ ಮೊದಲ ಅಧ್ಯಕ್ಷ ಅವಧಿಯ ಕೊನೆಯಲ್ಲಿ ಎರಡನೇ ಅವಧಿಗೆ ಸರ್ವಾನುಮತದಿಂದ ಪುನರಾಯ್ಕೆಯಾದನು. ಅವನ ಎರಡನೇ ಅವಧಿ 1796 ರಲ್ಲಿ ಕೊನೆಗೊಂಡಾಗ ಮತ್ತೊಂದು ಅವಧಿಗೆ ಆಯ್ಕೆಯನ್ನು ದೃಢವಾಗಿ ನಿರಾಕರಿಸಿ ವರ್ನಾನ್ ಪರ್ವತಕ್ಕೆ ಮರಳಿದನು. ಆ ಮೂಲಕ ಯುನೈಟೆಡ್ ಸ್ಟೇಟ್ಸ್ ನ ಅಧ್ಯಕ್ಷರು ಕೇವಲ ಎರಡು ಅವಧಿಗಳನ್ನು ಮಾತ್ರ ಪೂರೈಸುತ್ತಾರೆ. ಮೂರನೇ ಅವಧಿಗೆ ಯಾರಿಗೂ ಅವಕಾಶವಿಲ್ಲ.

ಪ್ರಮುಖ ಕಾರ್ಯಗಳು
ಉದಯೋನ್ಮುಖ ರಾಷ್ಟ್ರದ ಮೊದಲ ಅಧ್ಯಕ್ಷನಾಗಿ ಜಾರ್ಜ್ ವಾಷಿಂಗ್ಟನ್ (George Washington) ಸ್ಥಿರತೆಯನ್ನು ಒದಗಿಸಿದನು. ‘ಅಲೆಕ್ಸಾಂಡರ್ ಹ್ಯಾಮಿಲ್ಟನ್’ ಮತ್ತು ‘ಥಾಮಸ್ ಜೆಫರ್ಸನ್’ರ ನೇತೃತ್ವದ ಬಣಗಳೊಂದಿಗೆ ಚತುರತೆಯಿಂದ ವ್ಯವಹರಿಸಿದನು. ತಮ್ಮ ಆಡಳಿತಾತ್ಮಕ ಕರ್ತವ್ಯಕ್ಕೆ ಸಹಾಯ ಮಾಡಲು ಅಧ್ಯಕ್ಷೀಯ ಕ್ಯಾಬಿನೆಟ್‌ನ್ನು ಸ್ಥಾಪಿಸಿ ಕ್ಯಾಬಿನೇಟ್ ಸದಸ್ಯರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವನನ್ನು ಸಂಪರ್ಕಿಸುವಂತೆ ಮಾಡಿದನು. ಫೆಡರಲ್ ಅಧಿಕಾರವನ್ನು ಪ್ರದರ್ಶಿಸಲು ‘ವಿಸ್ಕಿ ದಂಗೆ’ಯನ್ನು ತೀವ್ರವಾಗಿ ತಣಿಸಿದನು. ಕಾಂಗ್ರೆಸ್‌ನ ಹಕ್ಕುಗಳನ್ನು ಗೌರವಿಸಿದುದರ ಜೊತೆಗೆ ಅದರ ಯಾವುದೇ ಹಕ್ಕುಗಳನ್ನು ಎಂದಿಗೂ ಉಲ್ಲಂಘಿಸಲಿಲ್ಲ. 1789 ರ ‘ನ್ಯಾಯಾಂಗ ಕಾಯ್ದೆ’ಯ ಮೂಲಕ ಸುಪ್ರೀಂ ಕೋರ್ಟ್ ಅನ್ನು ಸ್ಥಾಪಿಸಿ ‘ಜಾನ್ ಜೇ’ರವರನ್ನು ಮೊದಲ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿದನು. ದೇಶದ ಮೊದಲ ರಾಷ್ಟ್ರೀಯ ಬ್ಯಾಂಕ್‌ನ್ನು ಸ್ಥಾಪಿಸಿದನು ಹಾಗೂ ಸಂವಿಧಾನದಲ್ಲಿ ಹಕ್ಕುಗಳ ಮಸೂದೆಯನ್ನು ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದನು. ವಿದೇಶಾಂಗ ನೀತಿ ವಿಷಯದಲ್ಲಿ ಇತರ ರಾಷ್ಟ್ರಗಳೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಲು ಆದ್ಯತೆ ನೀಡಿ ಸಂಘರ್ಷದ ಸಂದರ್ಭಗಳಲ್ಲಿ ತಟಸ್ಥತೆಯನ್ನು ಉಳಿಸಿಕೊಂಡನು. ಬ್ರಿಟನ್ ಮತ್ತು ಸ್ಪೇನ್ ಜೊತೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದನು. ಆದರೆ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಯುದ್ಧ ಪ್ರಾರಂಭವಾದಾಗ ಅವನು ತಟಸ್ಥನಾಗಿಯೇ ಉಳಿದನು.

ವೈಯಕ್ತಿಕ ಜೀವನ
ಜನವರಿ 6, 1759 ರಂದು ಜಾರ್ಜ್ ವಾಷಿಂಗ್ಟನ್ (George Washington) ಇಬ್ಬರು ಮಕ್ಕಳ ತಾಯಿ 28 ವರ್ಷದ ಶ್ರೀಮಂತ ವಿಧವೆಯಾದ ‘ಮಾರ್ಥಾ ಡ್ಯಾಂಡ್ರಿಡ್ಜ್ ಕಸ್ಟಿಸ್’ಳನ್ನು ವಿವಾಹವಾದನು. ಆಕೆ ಎಸ್ಟೇಟ್‌ಗಳನ್ನು ನಿರ್ವಹಿಸುವಲ್ಲಿ ಅನುಭವಿ. ಮಕ್ಕಳಾಗದಿದ್ದರೂ ದಂಪತಿಗಳು ಬಹಳ ಹೊಂದಾಣಿಕೆಯ ಸಂಬಂಧವನ್ನು ಅನುಭವಿಸಿಸುತ್ತಿದ್ದರು.ವಾಷಿಂಗ್ಟನ್ ಮಾರ್ಥಾಳ ಮಕ್ಕಳಾದ ‘ಜಾನ್ ಪಾರ್ಕ್ ಕಸ್ಟಿಸ್’ ಮತ್ತು ‘ಮಾರ್ಥಾ ಪಾರ್ಕ್ಕಸ್ಟಿಸ್’ (ಪ್ಯಾಟ್ಸಿ) ರವರನ್ನು ತನ್ನವರಂತೆ ಪ್ರೀತಿಸುತ್ತಿದ್ದನು. 1773 ರಲ್ಲಿ ಪ್ಯಾಟ್ಸಿ ಮರಣ ಹೊಂದಿದಾಗ ತೊಂದರೆಗೀಡಾದ ವಾಷಿಂಗ್ಟನ್ ತನ್ನ ಎಲ್ಲಾ ವ್ಯವಹಾರಗಳನ್ನು ರದ್ದುಗೊಳಿಸಿ ಮೂರು ತಿಂಗಳ ಕಾಲ ಮಾರ್ಥಾಳೊಂದಿಗೆ ಇದ್ದನು. ನಂತರ 1781 ರಲ್ಲಿ ಜಾನ್ ನಿಧನನಾದಾಗ ತಮ್ಮ ಮೊಮ್ಮಕ್ಕಳಾದ ಎಲೀನರ್ ಪಾರ್ಕ್ ಕಸ್ಟಿಸ್ ಮತ್ತು ಜಾರ್ಜ್ ವಾಷಿಂಗ್ಟನ್ ಪಾರ್ಕ್ ಕಸ್ಟಿಸ್‌ರನ್ನು ತಾನೇ ಬೆಳೆಸಿದನು. ಮಾರ್ಚ್ 1797 ರಲ್ಲಿ ಮೌಂಟ್ ವೆರ್ನಾನ್‌ಗೆ ಹಿಂದಿರುಗಿದ ನಂತರ ವಾಷಿಂಗ್ಟನ್ ತನ್ನ ಎಸ್ಟೇಟ್‌ನಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದನು. ಆ ಮೂಲಕ ಅವನ ದೀರ್ಘ ಅನುಪಸ್ಥಿತಿಯಲ್ಲಿ ಮಾಡಿದ ಹಾನಿಗಳನ್ನು ಸರಿಪಡಿಸಲು ಪ್ರಯತ್ನಿಸಿದನು. ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ಡಿಸೆಂಬರ್ 12, 1799 ರಂದು ತನ್ನ ಎಸ್ಟೇಟ್ ಸುತ್ತಲೂ ಸವಾರಿ ಮಾಡಿದನು.

ತೀರ್ವ ಗಂಟಲು ನೋವಿನಿಂದ ಡಿಸೆಂಬರ್ 14, 1799 ರಂದು ರಾತ್ರಿ 10 ಗಂಟೆಗೆ ‘ಮೌಂಟ್ ವೆರ್ನಾನ್’ನಲ್ಲಿದ್ದ ತನ್ನ ಮನೆಯಲ್ಲಿ ವಾಷಿಂಗ್ಟನ್‌ ಮರಣ ಹೊಂದಿದನು. ಆತನ ಕೊನೆಯ ಮಾತು ‘ಟಿಸ್ ವೆಲ್’. ಅವನ ದೇಹವನ್ನು ಮೌಂಟ್ ವೆರ್ನಾನ್‌ನಲ್ಲಿ ಸಮಾಧಿ ಮಾಡಲಾಯಿತು. ವಾಷಿಂಗ್ಟನ್‌ನ ಅವಶೇಷಗಳನ್ನು ರಾಜಧಾನಿಯಿಂದ ತೆಗೆದುಹಾಕುವ ಕುರಿತು ಮಾತುಕತೆ ನಡೆದಿದ್ದರೂ ಇಂದಿಗೂ ತನ್ನ ಮೂಲ ಸ್ಥಳದಲ್ಲಿಯೇ ಉಳಿದಿವೆ. ಆದಾಗ್ಯೂ ವಿಧ್ವಂಸಕ ಕೃತ್ಯದಿಂದ ರಕ್ಷಿಸಲು ಅವಶೇಷಗಳನ್ನು 1837 ರ ಅಕ್ಟೋಬರ್ 7 ರಂದು ಅಮೃತ ಶಿಲೆಯ ಸಾರ್ಕೊಫಾಗಸ್‌ನೊಳಗೆ ಇರಿಸಿ ಮೊಹರು ಹಾಕಲಾಯಿತು.

‘ದೇಶದ ಪಿತಾಮಹ’ ಎಂದು ಕರೆಯಲ್ಪಡುವ ವಾಷಿಂಗ್ಟನ್‌ನ ಹೆಸರನ್ನು ರಾಷ್ಟ್ರ ರಾಜಧಾನಿಗೆ ಮಾತ್ರವಲ್ಲದೆ ಯು.ಎಸ್‌.ನ ನೂರಾರು ಪಟ್ಟಣಗಳು ಮತ್ತು ಶಾಲೆಗಳಿಗೆ ಇಡಲಾಗಿದೆ. ಅವನ ಮುಖವು ಯು.ಎಸ್. ಡಾಲರ್ ಬಿಲ್‌ನಲ್ಲಿ ಗೋಚರಿಸುತ್ತದೆ ಮತ್ತು ಅವನ ಪ್ರತಿಮೆಗಳು ದೇಶಾದ್ಯಂತ ಅನೇಕ ಉದ್ಯಾನವನಗಳನ್ನು ಅಲಂಕರಿಸಿವೆ. ರಾಜಕೀಯ ಪಕ್ಷವಿಲ್ಲದೇ ಅಧಿಕಾರ ಪಡೆದ ಏಕೈಕ ಅಧ್ಯಕ್ಷ. ವಾಸ್ತವವಾಗಿ ರಾಜಕೀಯ ಪಕ್ಷಗಳ ಕಲ್ಪನೆಯನ್ನು ದ್ವೇಷಿಸುತ್ತಿದ್ದನು. ಎಷ್ಟರ ಮಟ್ಟಿಗೆಂದರೆ ತಮ್ಮ ವಿದಾಯ ಭಾಷಣದಲ್ಲಿ ರಾಜಕೀಯ ಪಕ್ಷಗಳು ತಂದೊಡ್ಡುವ ಅಪಾಯಗಳ ಬಗ್ಗೆ ಅಮೆರಿಕನ್ನರಿಗೆ ಎಚ್ಚರಿಕೆ ನೀಡಿದನು..

# ಜಾರ್ಜ್ ವಾಷಿಂಗ್ಟನ್

# George Washington

# Kannada Butti

# ಕನ್ನಡ ಬುಟ್ಟಿ