ವಿಶಾಲ ಪ್ರಪಂಚದಲ್ಲಿ ಸಾಮಾನ್ಯ ಜನರನ್ನು ಹುಟ್ಟಿಹಾಕಿದ್ದು, ಅದೇ ಸಾಮಾನ್ಯ ಜನರಿಂದ ಕೆಲವು ವ್ಯಕ್ತಿಗಳನ್ನು ಮಹಾನ್ ವ್ಯಕ್ತಿಗಳಾಗಿ, ಸ್ವಾತಂತ್ರ್ಯ ಪುರುಷರಾಗಿ, ಕ್ರಾಂತಿಕಾರರಾಗಿ, ವೀರಯೋಧರಾಗಿ, ದಂಡನಾಯಕರಾಗಿ, ಉತ್ತಮ ವಾಗ್ಮಿಯಾಗಿ, ಸಮರ್ಥ ಆಡಳಿತಗಾರರನ್ನಾಗಿ, ಸರ್ವೋತ್ತಮ ಪ್ರಜೆಗಳನ್ನಾಗಿ ಬದಲಾಯಿಸಿ, ಮಣ್ಣಲ್ಲಿ ಮಣ್ಣಾಗಿಸಿದ್ದು ಇತಿಹಾಸ. ಹಾಗೇಯೆ ಇದೇ ಇತಿಹಾಸದ ಕಡೆ ಓರೆ ನೋಟ ಬೀರುತ್ತಿದ್ದಾಗ ಪ್ರಪಂಚದಾದ್ಯಂತ ಹಲವಾರು ಮಹಾನ್ ನಾಯಕರು ತಮ್ಮ ಸ್ವಂತ ಪರಿಶ್ರಮದಿಂದ ಅತ್ಯುತ್ತಮ ಸ್ಥಾನವನ್ನು ಅಲಂಕರಿಸಿ ತಮ್ಮದೇ ಆದ ಮಹತ್ವದ ಕೊಡುಗೆಯನ್ನು ನೀಡಿರುವುದು ನಮ್ಮೇಲ್ಲರಿಗು ತಿಳಿದಿರುವ ವಿಷಯವಾಗಿದೆ. ಆದರೇ ಇಲ್ಲಿ ನಾನು ಅಂತಹ ಮಹಾನ್ ನಾಯಕರಲ್ಲಿ ಪ್ರಮುಖವಾಗಿ ಕೆಲವು ಕ್ರಾಂತಿಕಾರಿಗಳ ಹೆಸರುಗಳನ್ನು ತೆಗೆದುಕೊಂಡು ಅವರ ಜೀವನ ಚರಿತ್ರೆ, ಕಾರ್ಯತಂತ್ರಗಳು, ಅವರ ಮಹಾನ್ ಕಾರ್ಯಗಳು, ಭೀಕರ ಘಟನೆಗಳು, ಕಷ್ಟದುಖಃಗಳು, ಆಡಳಿತ ವೈಕರಿಗಳು, ಜೀವನದ ಏರಿಳಿತ ಹಾಗೂ ಕೊನೆಯದಾಗಿ ಅವರುಗಳ ಸುಖಾಂತ್ಯ ಹಾಗೂ ದುರಂತ ಅಂತ್ಯದ ಬಗ್ಗೆ ನಮ್ಮೇಲ್ಲಾ ಓದುಗರಿಗಾಗಿ ನನಗೆ ಸಾಧ್ಯವಾದಷ್ಟು ಮಾಹಿತಿಗಳನ್ನು ಆಲದ ಮರದ ಕೊಂಬೆಯ ರೀತಿಯಲ್ಲಿ ನಿಮಗೆ ತಲುಪಿಸಲು ಪ್ರಯತ್ನಿಸಿದ್ದೇನೆ.
ಇವರಲ್ಲಿ ಬಹಳಷ್ಟು ಮಂದಿ ಸಾಮಾನ್ಯ ಬಡ ರೈತರ ಕುಟುಂಬದಲ್ಲಿ ಹುಟ್ಟಿದವರಾಗಿದ್ದರೆ, ಕೆಲವರು ಮಧ್ಯಮ ವರ್ಗ ಮತ್ತೆ ಕೆಲವರು ಶ್ರೀಮಂತ ವರ್ಗದಲ್ಲಿ ಹುಟ್ಟಿದವರು. ನಂತರ ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ರೈತರಾಗಿ, ಗುಲಾಮರಾಗಿ, ವೈದ್ಯ, ಶಿಕ್ಷಕ, ಕ್ಯಾಥೋಲಿಕ್ ಪಾದ್ರಿ, ಕವಿ, ಲೇಖಕ, ಬರಹಗಾರ, ವಿದ್ವಾಂಸ, ಗೆರಿಲ್ಲಾ ನಾಯಕ, ರಾಜತಾಂತ್ರಿಕ, ಮಿಲಿಟರಿ ಸಿದ್ಧಾಂತಿ, ವಕೀಲ, ನ್ಯಾಯವಾದಿ, ರಾಜಕಾರಣಿ, ಕ್ರಾಂತಿಕಾರಿ, ಗ್ಲಾಡಿಯೇಟರ್, ಸ್ವಾತಂತ್ರ್ಯ ಹೋರಾಟಗಾರ, ಸಾಮಾನ್ಯ ಸೈನಿಕ, ಮಿಲಿಟರಿ ನಾಯಕ, ಸೈನ್ಯದ ದಂಡನಾಯಕ, ತತ್ವಜ್ಞಾನಿ, ಸರ್ವೇಯರ್, ಕಾನ್ಸುಲ್; ಹೀಗೆ ಕೆಳ ಹಂತದಿAದ ಪ್ರಾರಂಭವಾಗಿ ಹಲವಾರು ಹುದ್ದೆಗಳಲ್ಲಿ ಹಂತ ಹಂತವಾಗಿ ಮೇಲೇರಿ; ಚಕ್ರವರ್ತಿ, ಅಧ್ಯಕ್ಷ, ಪ್ರಧಾನಿ, ಪಿತಾಮಹ, ಕಮಾಂಡರ್ ಇನ್ ಚೀಫ್ ಮುಂತಾದ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ತಮ್ಮದೇ ಆದ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.
ಈ ಮಹಾನ್ ಕ್ರಾಂತಿಕಾರಿಗಳು ಒಬ್ಬ ಸಾಮಾನ್ಯ ಮನುಷ್ಯರಂತೆ ಹುಟ್ಟಿದ್ದರೂ ಸಹ ಅವರು ತಮ್ಮ ಜೀವನವನ್ನು ಸಾಮಾನ್ಯನಂತೆ ಕಳೆಯದೇ, ಎಲ್ಲಾ ತರಹದ ಕಷ್ಟಗಳನ್ನು ಅನುಭವಿಸಿ, ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ, ಗಣರಾಜ್ಯ ಸ್ಥಾಪನೆಗಾಗಿ, ಗುಲಾಮಗಿರಿಯಿಂದ ತಮ್ಮ ಮುಕ್ತಿಗಾಗಿ, ವಸಾಹತುಶಾಹಿತ್ವದ ವಿರುದ್ದವಾಗಿ, ಬಂಡವಾಳಶಾಹಿಗಳ ಬಹಿಷ್ಕಾರಕ್ಕಾಗಿ, ಬುಡಕಟ್ಟು ಜನರ ಏಳ್ಗೆಗಾಗಿ, ವರ್ಣಭೇದ ನೀತಿಯ ವಿರುದ್ದ ಹೋರಾಟಕ್ಕಾಗಿ, ಕಾರ್ಮಿಕ ವರ್ಗದ ವಿಮೋಚನೆಗಾಗಿ, ಏಕೀಕರಣಕ್ಕಾಗಿ, ವಿದೇಶಿ ಪ್ರಭುತ್ವ ಮುಕ್ತಿಗಾಗಿ, ಬಿಳಿ ವಸಾಹತುಶಾಹಿಗಳ ವಿಮೋಚನೆಗಾಗಿ ಹೋರಾಡಿ ತಮ್ಮ ದೇಶವನ್ನು ಪಾರು ಮಾಡಿದ್ದಾರೆ. ಅವರಲ್ಲಿ ಕೆಲವರು ಅದೇ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿ ತಮ್ಮ ರಾಜ್ಯ ಹಾಗೂ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟರು. ಅವರ ಚರಿತ್ರೆಯ ಒಂದು ನೋಟವನ್ನು ಇಲ್ಲಿ ಸ್ಮರಿಸುತ್ತಿದ್ದೇನೆ.